ಕುಂದಗೋಳ,ಮೇ 10- ಸಚಿವ ಶಿವಳ್ಳಿ ಸಾವಿಗೆ ಕಾಂಗ್ರೆಸ್ ಪಕ್ಷ ಹಾಗೂ ಮೈತ್ರಿ ಸರ್ಕಾರದ ಕಿರುಕುಳವೇ ಕಾರಣ ಎಂಬ ಶ್ರೀರಾಮುಲು ಹೇಳಿಕೆಯನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡು ಚುನಾವಣೆಯಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.
ಶ್ರೀರಾಮುಲು ಅವರ ಈ ಹೇಳಿಕೆ ಮುಳುವಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಬಿಜೆಪಿ ಮುಖಂಡರು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿದ್ದಾರೆ.
ಇದಲ್ಲದೇ ಪ್ರಚಾರದ ವೈಖರಿಯನ್ನೇ ಬದಲಾಯಿಸಿದ್ದಾರೆ. ಇಂದು ಪ್ರಚಾರಕ್ಕೆ ಆಗಮಿಸಬೇಕಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನಿನ್ನೆಯೇ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಹೂಡಿ ಸ್ಥಳೀಯ ಬಿಜೆಪಿ ನಾಯಕರ ಜೊತೆ ರಾತ್ರಿಯಿಡೀ ಮಹತ್ವದ ಚರ್ಚೆ ನಡೆಸಿದ್ದಾರೆ. ಶ್ರೀರಾಮುಲು ಹೇಳಿಕೆಯಿಂದ ಆಗಬಹುದಾದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದವರು ಶ್ರೀರಾಮುಲು ಅವರ ಹೇಳಿಕೆ ಸಂಬಂಧ ಆಯೋಗಕ್ಕೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಎಚ್ಚೆತ್ತಿರುವ ಬಿಜೆಪಿ ಮುಖಂಡರು ಪ್ರಚಾರದ ಭರಾಟೆಯನ್ನು ತೀವ್ರಗೊಳಿಸಿ, ಎಲ್ಲಾ ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡುವ ಮೂಲಕ ಸಮುದಾಯವಾರು ಮತ ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ.
ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಉಪ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸಿದ್ದರಾಮಯ್ಯನವರ ಮಗನ ಸಾವಿನ ಬಗ್ಗೆ ಆಡಿದ ಮಾತೇ ಬಿಜೆಪಿಗೆ ಮುಳುವಾಗಿತ್ತು. ಬಳ್ಳಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದರು.
ಪ್ರಸ್ತುತ ಕುಂದಗೋಳದಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಶಿವಳ್ಳಿ ಅವರ ಸಾವಿನ ಕುರಿತು ನೀಡಿರುವ ಹೇಳಿಕೆಯನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಕಾಂಗ್ರೆಸ್ ಹೋದೆಡೆ, ಬಂದೆಡೆಯೆಲ್ಲಾ ಪ್ರಚಾರ ನಡೆಸುತ್ತಿದೆ. ತೀವ್ರ ಹೃದಯಾಘಾತದಿಂದ ಶಿವಳ್ಳಿಯವರು ಸಾವನ್ನಪ್ಪಿದ್ದು, ಆದರೆ ಶ್ರೀರಾಮುಲು ಅವರು ಕಿರುಕುಳದಿಂದ ಸಾವನ್ನಪ್ಪಿದ್ದಾರೆ ಎಂದು ನೀಡಿರುವ ಹೇಳಿಕೆಯನ್ನು ತನಿಖೆ ನಡೆಸಲು ಕಾಂಗ್ರೆಸ್ ದೂರು ಕೂಡ ನೀಡಿದೆ.
ಇಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಪ್ರಹ್ಲಾದ ಜೋಶಿ ಮುಂತಾದ ನಾಯಕರು ಸಮಾವೇಶಗಳನ್ನು ಪಾಲ್ಗೊಂಡು ಮತ ಯಾಚನೆ ನಡೆಸುತ್ತಿದ್ದಾರೆ.