ಬೆಂಗಳೂರು, ಮೇ 10- ಬಿಬಿಎಂಪಿ ಉಪಚುನಾವಣೆಯಲ್ಲೂ ಮೈತ್ರಿ ಮುಂದುವರೆಸಿ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಆ ಪಕ್ಷಗಳಲ್ಲಿನ ಒಳಜಗಳವೇ ಮುಳುವಾಗಿದೆ.
ಉಪಮೇಯರ್ ರಮೀಳ ಉಮಾಶಂಕರ್ ಹಾಗೂ ಪಕ್ಷೇತರ ಸದಸ್ಯ ಏಳುಮಲೈ ಅವರ ನಿಧನದಿಂದ ತೆರವಾಗಿರುವ ಕಾವೇರಿಪುರ ಹಾಗೂ ಸಗಾಯಿಪುರಂ ವಾರ್ಡ್‍ಗಳಿಗೆ ಮೇ 29ರಂದು ಚುನಾವಣೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡ ಮೈತ್ರಿಯಂತೆ ಬಿಬಿಎಂಪಿ ಉಪಚುನಾವಣೆಯಲ್ಲೂ ಒಂದಾಗಿ ಚುನಾವಣೆ ಎದುರಿಸಲು ಮೈತ್ರಿ ಪಕ್ಷ ತೀರ್ಮಾನಿಸಿದೆ ಅದರಂತೆ ಕಾವೇರಿಪುರ ವಾರ್ಡ್‍ನ್ನು ಜೆಡಿಎಸ್‍ಗೆ, ಸಗಾಯಿಪುರ ವಾರ್ಡ್‍ನ್ನು ಕಾಂಗ್ರೆಸ್ ಬಿಟ್ಟುಕೊಡುವ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಕಾವೇರಿಪುರ ವಾರ್ಡ್‍ನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದರಿಂದ ಸಹಜವಾಗಿಯೇ ರಮೀಳ ಉಮಾಶಂಕರ್ ಅವರ ಕುಟುಂಬ ವರ್ಗದವರಿಗೆ ಟಿಕೆಟ್ ನೀಡಲಾಗುವುದು ಎಂದೇ ಭಾವಿಸಲಾಗಿತ್ತು.
ಜೆಡಿಎಸ್ ವರಿಷ್ಠರು ನನ್ನ ಸಹೋದರಿ ಜಯಲಕ್ಷ್ಮಮ್ಮ ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂದು ಉಮಾಶಂಕರ್ ಉತ್ಸಾಹದಲ್ಲಿದ್ದಾರೆ. ಆದರೆ ಅವರ ಈ ಆಸೆಗೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಣ್ಣೀರೆರಚಿದ್ದಾರೆ.
ಯಾವುದೇ ಕಾರಣಕ್ಕೂ ಕಾವೇರಿಪುರ ವಾರ್ಡ್ ಉಪಚುನಾವಣೆಯಲ್ಲಿ ಉಮಾಶಂಕರ್ ಸಂಬಂಧಿಕರಿಗೆ ಟಿಕೆಟ್ ನೀಡುವುದಿಲ್ಲ. ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಹೀಗಾಗಿ ಪ್ರಕಾಶ್ ಮತ್ತು ಉಮಾಶಂಕರ್ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.ಜೆಡಿಎಸ್‍ನಲ್ಲಿ ಭುಗಿಲೆದ್ದಿರುವ ಈ ಒಳಜಗಳವನ್ನೇ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಮುಖಂಡರು ತೆರೆಮರೆ ಕಸರತ್ತು ಆರಂಭಿಸಿದ್ದಾರೆ.
ಬಿಜೆಪಿಯಿಂದ ಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಅವರ ಪುತ್ರಿ ಪಲ್ಲವಿ ಅವರನ್ನು ಕಣಕ್ಕಿಳಿಸಲಾಗುತ್ತಿದ್ದು, ಎದುರಾಳಿ ಅಭ್ಯರ್ಥಿಗೆ ತಿರುಗೇಟು ನೀಡಲು ಶಾಸಕ ವಿ.ಸೋಮಣ್ಣ ತಂತ್ರ ರೂಪಿಸುತ್ತಿದ್ದಾರೆ.
ಉಮಾಶಂಕರ್ ಅವರ ಸಹೋದರಿಗೆ ಜೆಡಿಎಸ್ ಟಿಕೆಟ್ ನೀಡಲು ನಿರಾಕರಿಸಿದರೆ ಉಮಾಶಂಕರ್ ಅವರನ್ನು ಬಿಜೆಪಿಗೆ ಸೆಳೆಯಲು ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ.ಒಂದು ವೇಳೆ ಸೋಮಣ್ಣ ಅವರ ಈ ಯತ್ನ ಸಫಲವಾದರೆ ಕಾವೇರಿಪುರದಲ್ಲಿ ಬಿಜೆಪಿಗೆ ಬಲ ಬಂದಂತಾಗುತ್ತದೆ.
ಸಗಾಯಿಪುರಂನಲ್ಲೂ ಗೋಳು:
ಕಾವೇರಿಪುರ ವಾರ್ಡ್‍ನ ಕಥೆ ಒಂದು ಕಡೆಯಾದರೆ ಸಗಾಯಿಪುರಂ ವಾರ್ಡ್‍ನಲ್ಲಿ ಮತ್ತೊಂದು ಕಥೆ ಕೇಳಿಬರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಏಳುಮಲೈ ಅವರ ನಿಧನದ ನಂತರ ಅವರ ಪತ್ನಿ ಲೀನಾ ಅವರಿಗೆ ಕೈ ಪಕ್ಷದ ಟಿಕೆಟ್ ನೀಡುವ ಸಾಧ್ಯತೆ ಇತ್ತು.
ಆದರೆ ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿರುವ ಏಳುಮಲೈ ಅವರ ಸಹೋದರ ವೇಲು ಅವರು ನನ್ನ ಮತ್ತೊಬ್ಬ ಸಹೋದರಿ ಪಳನಿಯಮ್ಮಾಳ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ನಮ್ಮ ಮಾತು ಮೀರಿ ಲೀನಾರಿಗೆ ಟಿಕೆಟ್ ನೀಡಿದರೆ ನಾವು ಅನ್ಯಮಾರ್ಗ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ಏಳುಮಲೈ ಅವರ ಕುಟುಂಬ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಏಳುಮಲೈ ಕುಟುಂಬದಲ್ಲಿ ಎದ್ದಿರುವ ಬಿರುಗಾಳಿಯನ್ನೇ ಬಂಡವಾಳ ಮಾಡಿಕೊಳ್ಳಲು ಜೆಡಿಎಸ್‍ನ ಮಾಜಿ ಸದಸ್ಯೆ ಮಾರಿಮುತ್ತು ಮುಂದಾಗಿದ್ದಾರೆ.
ಮೈತ್ರಿ ಧರ್ಮದಂತೆ ಸಗಾಯಿಪುರಂ ವಾರ್ಡ್ ಕಾಂಗ್ರೆಸ್ ಪಕ್ಷಕ್ಕೆ ಒಲಿದರೆ ಜೆಡಿಎಸ್ ಮಾಜಿ ಸದಸ್ಯೆ ಮಾರಿಮುತ್ತು ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸುವ ತಂತ್ರ ರೂಪಿಸುತ್ತಿದ್ದಾರೆ.
ಕಾವೇರಿಪುರ ಮತ್ತು ಸಗಾಯಿಪುರ ವಾರ್ಡ್‍ನಲ್ಲಿ ಮೈತ್ರಿ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟದ ಲಾಭ ಪಡೆದು ಎರಡೂ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪಾಲಿಕೆಯಲ್ಲಿ ತನ್ನ ಸಂಖ್ಯೆಯನ್ನು 101ರಿಂದ 103ಕ್ಕೆ ಹೆಚ್ಚಿಸಿಕೊಳ್ಳಲು ಬಿಜೆಪಿ ಸದ್ದಿಲ್ಲದೆ ಕಸರತ್ತು ನಡೆಸುತ್ತಿದೆ.
ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಪ್ರಸಕ್ತ ಸಾಲಿನ ಕೊನೆ ಅವಧಿಯ ಮೇಯರ್ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.






