![rahul-gandhi](http://kannada.vartamitra.com/wp-content/uploads/2019/05/rahul-gandhi-2-677x381.jpg)
ನವದೆಹಲಿ,ಮೇ 9-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಷ್ಟ್ರೀಯತೆ ಕುರಿತಂತೆ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ವಜಾಗೊಳಿಸಲಾಗಿದೆ.
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯಾಗಿದ್ದು, ಕೂಡಲೇ ಅವರ ನಾಮಪತ್ರವನ್ನು ತಿರಸ್ಕರಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್‍ಗೆ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯ ಸ್ವಾಮಿ ಮೇಲ್ಮನವಿ ಸಲ್ಲಿಸಿದ್ದರು.
ರಾಹುಲ್ ಗಾಂಧಿ ಇಂಗ್ಲೆಂಡ್‍ನಲ್ಲಿ ಕಂಪನಿ ಒಡೆತನದ ಮಾಲೀಕರಾಗಿದ್ದಾರೆ. ಅವರು ಅಲ್ಲಿನ ಪ್ರಜೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿರುವ ಅವರನ್ನು ತಕ್ಷಣವೇ ತಿರಸ್ಕರಿಸಲು ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಇಂದು ಅರ್ಜಿಯನ್ನು ಇತ್ಯರ್ಥಗೊಳಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಎಲ್.ದತ್ತು ಹಾಗೂ ಅಮಿತಾವ ರಾವ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿ ಇದರಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಹೇಳಿದೆ.
ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಯಲ್ಲಿ ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ ಎಂಬುದಕ್ಕೆ ಪ್ರಬಲವಾದ ಸಾಕ್ಷ್ಯಾಧಾರಗಳನ್ನು ಸಲ್ಲಿಸಿಲ್ಲ. ಈಗಾಗಲೇ ಅವರು ಇಲ್ಲಿಯೇ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅರ್ಜಿಯನ್ನು ನಾವು ವಜಾ ಮಾಡುತ್ತೇವೆ ಎಂದು ದ್ವಿಸದಸ್ಯ ಪೀಠದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.
ಇದಕ್ಕೂ ಮುನ್ನ ದೆಹಲಿಯ ಇಬ್ಬರು ನಿವಾಸಿಗಳು ರಾಹುಲ್ ಗಾಂಧಿ ಅವರನ್ನು ಚುನಾವಣಾ ಕಣದಿಂದಲೇ ಅನರ್ಹಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಕೇಂದ್ರ ಗೃಹ ಇಲಾಖೆಯು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿತ್ತು.
ಈಗ ಅವರ ಪೌರತ್ವ ವಿವಾದ ಕುರಿತಂತೆ ನ್ಯಾಯಾಲಯವೇ ಇತ್ಯರ್ಥಗೊಳಿಸಿರುವುದರಿಂದ ರಾಹುಲ್ ಗಾಂಧಿ ಭಾರತದ ಪ್ರಜೆಯೋ, ಇಲ್ಲವೇ ಬ್ರಿಟಿಷ್ ಪ್ರಜೆಯೋ ಎಂಬುದರ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.