ಬೆಂಗಳೂರು, ಮೇ 9-ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ನಾಗೇಂದ್ರ ಇಂದು ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಸಮ್ಮಿಶ್ರ ಸರ್ಕಾರ ಬಜೆಟ್ ಅಧಿವೇಶನದ ವೇಳೆ ಶಾಸಕರಾದ ನಾಗೇಂದ್ರ, ಮಹೇಶ್ ಕಮಟಳ್ಳಿ, ಉಮೇಶ್ ಜಾಧವ್ ಅವರು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಜೊತೆ ಸೇರಿಕೊಂಡು ಮಹಾರಾಷ್ಟ್ರದ ಹೊಟೇಲ್‍ವೊಂದರಲ್ಲಿ ತಂಗಿದ್ದರು. ಇದು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೊನೆಗೆ ಕಾಂಗ್ರೆಸ್ ನಾಯಕರು ನೀಡಿದ ಎಚ್ಚರಿಕೆ ಮತ್ತು ಸಿದ್ದರಾಮಯ್ಯ ಅವರು ಅತೃಪ್ತರ ವಿರುದ್ಧ ಸ್ಪೀಕರ್‍ಗೆ ದೂರು ನೀಡಿದ ಮೇಲೆ ನಾಗೇಂದ್ರ ಅವರು ಇತರ ಶಾಸಕರ ಜೊತೆ ಬೆಂಗಳೂರಿಗೆ ಆಗಮಿಸಿದ್ದಲ್ಲದೆ, ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಆನಂತರ ಮತ್ತೆ ನಾಗೇಂದ್ರ ತೆರೆಮರೆಗೆ ಸರಿದಿದ್ದರು.
ಇತ್ತೀಚಿನ ಬೆಳವಣಿಗೆಗಳಲ್ಲಿ ಅತೃಪ್ತ ಶಾಸಕರು ತಮ್ಮ ಬಂಡಾಯದ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ. ಕಾಂಗ್ರೆಸ್ ನಾಯಕರುಗಳು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಂಧಾನ ಪ್ರಕ್ರಿಯೆ ಕೈಬಿಟ್ಟು, ಅತೃಪ್ತರನ್ನು ಕಾನೂನಿನ ಅಸ್ತ್ರದ ಮೂಲಕ ಸದೆಬಡಿಯಲು ಮುಂದಾಗಿದ್ದಾರೆ.
ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಾಂಗ್ರೆಸ್‍ನ ಅತೃಪ್ತ ಶಾಸಕರ ಜೊತೆ ಹಂತ ಹಂತವಾಗಿ ಮಾತುಕತೆ ನಡೆಸುವ ಮೂಲಕ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ರಹಸ್ಯ ರಣತಂತ್ರ ಹೆಣೆದಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಸಂಧಾನ ಸಭೆಗಳ ಮೂಲಕ ಬಿಜೆಪಿ ಪ್ರಯತ್ನ ವಿಫಲಗೊಳಿಸುತ್ತಿದ್ದಾರೆ. ಇತ್ತೀಚೆಗೆ ರಮೇಶ್ ಜಾರಕಿ ಹೊಳಿ ಜೊತೆ ಕುಮಾರಸ್ವಾಮಿ ಸಂಸದ ಬಿ.ವಿ.ನಾಯಕ್ ಮೂಲಕ ನಡೆಸಿದ ಸಂಧಾನ ಭಾಗಶಃ ಯಶಸ್ವಿಯಾಗಿದ್ದು, ಈಗ ನಾಗೇಂದ್ರ ಅವರ ಜೊತೆಯೂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ.
ಮಹೇಶ್ ಕುಮಟಳ್ಳಿ ಜೊತೆ ಕೂಡ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೆ ಹೋಗುವ ಮುನ್ನ ಸುಮಾರು ಅರ್ಧ ಗಂಟೆ ಕಾಲ ಕುಮಾರಸ್ವಾಮಿ ಮತ್ತು ನಾಗೇಂದ್ರ ಅವರು ಚರ್ಚೆ ನಡೆಸಿದರು. ನಂತರ ಸಂಪುಟ ಸಭೆ ನಂತರವೂ ಈ ಇಬ್ಬರು ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.