ಬೆಂಗಳೂರು, ಮೇ 9-ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಜೊತೆಗಿನ ಸಂಧಾನ ಮುಗಿದ ಅಧ್ಯಾಯ ಎಂದು ಖಡಾಖಂಡಿತವಾಗಿ ಹೇಳಿದ್ದ ಸಚಿವ ಸತೀಶ್ ಜಾರಕಿ ಹೊಳಿ ಇದ್ದಕ್ಕಿದ್ದಂತೆ ಮೆತ್ತಗಾಗಿದ್ದು, ಹೈಕಮಾಂಡ್ ನಾಯಕರು ಬೇಕಿದ್ದರೆ ಮಧ್ಯಪ್ರವೇಶಿಸಿ ಸಂಧಾನ ಮಾಡಲಿ ಎಂದು ಹೇಳಿದ್ದಾರೆ.
ರಮೇಶ್ ಜಾರಕಿ ಹೊಳಿ ಒಂದಷ್ಟು ಶಾಸಕರ ಜೊತೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರ್ಕಾರಕ್ಕೆ ಅಪಾಯತಂದೊಡ್ಡುತ್ತಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದವು. ಇತ್ತೀಚೆಗೆ ಮೂರು ಬಾರಿ ರಮೇಶ್‍ಜಾರಕಿ ಹೊಳಿ ಅತೃಪ್ತರನ್ನು ಕಲೆ ಹಾಕುವ ವಿಫಲ ಯತ್ನ ಮಾಡಿ ಕೈ ಚೆಲ್ಲಿದ್ದರು. ಪರಿಸ್ಥಿತಿ ಗಂಭೀರತೆಯನ್ನು ಅರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಯಚೂರಿನ ಸಂಸದ ಬಿ.ವಿ.ನಾಯಕ್ ಮೂಲಕ ಸಂಧಾನಕ್ಕೆ ಮುಂದಾಗಿದ್ದರು.ಅದು ಒಂದಿಷ್ಟು ಫಲ ನೀಡಿತ್ತು.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡಿ ನಿನ್ನೆಯಷ್ಟೆ ಬೆಂಗಳೂರಿನಿಂದ ಬೆಳಗಾವಿಗೆ ವಾಪಸ್ಸಾಗಿದ್ದ ರಮೇಶ್ ಜಾರಕಿ ಹೊಳಿ, ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದವರೆಗೂ ನಾನು ರಾಜೀನಾಮೆ ವಿಷಯವನ್ನು ಮಾತನಾಡಲು ಹೋಗುವುದಿಲ್ಲ. ಆಮೇಲೆ ಸೂಕ್ತ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ದೋಸ್ತಿ ಸರ್ಕಾರದ ಭವಿಷ್ಯಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದರು.
ಈವರೆಗೂ ಮೂರ್ನಾಲ್ಕು ಬಾರಿ ರಮೇಶ್ ಜಾರಕಿ ಹೊಳಿ ಕುರಿತಂತೆ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿ ಹೊಳಿ, ಸಂಧಾನದ ಪ್ರಕ್ರಿಯೆ ಮುಗಿದಿದೆ. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ. ಯಾವುದೋ ಒಂದು ವಸ್ತು ಕಳೆದುಕೊಂಡಿದ್ದಾರೆ. ಅದಕ್ಕಾಗಿ ಅವರು ಈ ರೀತಿ ಆಡುತ್ತಿದ್ದಾರೆ ಎಂಬೆಲ್ಲಾ ಮಾತುಗಳನ್ನಾಡಿದ್ದರು.
ರಮೇಶ್ ಜಾರಕಿ ಹೊಳಿ ಪ್ರತಿನಿಧಿಸುವ ಗೋಕಾಕ್ ಕ್ಷೇತ್ರಕ್ಕೆ ತಮ್ಮ ಇನ್ನೊಬ್ಬ ಸಹೋದರ ಲಖನ್ ಜಾರಕಿ ಹೊಳಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದು ಕೂಡ ಸತೀಶ್ ಜಾರಕಿ ಹೊಳಿ ಘೋಷಣೆ ಮಾಡಿ ಆಗಿತ್ತು.
ಇಂದು ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್ ಜಾರಕಿ ಹೊಳಿ, ತಮ್ಮ ರಾಗ ಬದಲಿಸಿದ್ದಾರೆ.ಈವರೆಗೂ ರಮೇಶ್ ಜಾರಕಿ ಹೊಳಿ ಅವರನ್ನು ಸಂಧಾನ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ. ಇನ್ನು ಮುಂದೆ ಸಂಧಾನ ನಡೆಯುವುದಾದರೆ ಅದಕ್ಕೆ ಹೈಕಮಾಂಡ್ ಮತ್ತು ರಾಜ್ಯದ ವರಿಷ್ಠರು ಮಧ್ಯಪ್ರವೇಶ ಮಾಡಬೇಕೆಂದು ಹೇಳಿದ್ದಾರೆ.
ಕಾಂಗ್ರೆಸ್‍ನ ಶಾಸಕರು, ಸಚಿವರುಗಳೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಅತೃಪ್ತರ ಬಣ ದಿನೇ ದಿನೇ ಹೆಚ್ಚಾಗುತ್ತಿದೆ. ಹಿಡಿತ ತಪ್ಪಿದ ಮಾತುಗಳಿಂದ ದೋಸ್ತಿಗಳಲ್ಲಿ ಬಿರುಕು ಮೂಡುವ ಪ್ರಸಂಗಗಳು ಹೆಚ್ಚಾಗುತ್ತಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ರಮೇಶ್ ಜಾರಕಿ ಹೊಳಿ ಒಂದಷ್ಟು ಶಾಸಕರನ್ನು ಗುಂಪುಗೂಡಿಸಿಕೊಂಡು ರಾಜೀನಾಮೆ ನೀಡಿ ಹೊರಹೋದರೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವವೇ ಪತನಗೊಳ್ಳುತ್ತದೆ. ಹೀಗಾಗಿ ಕಾಂಗ್ರೆಸ್‍ನ ಬಂಡಾಯ ನಾಯಕರ ಬಗ್ಗೆ ಇದ್ದಕ್ಕಿದ್ದಂತೆ ಮೃದು ಧೋರಣೆಗಳು ಆರಂಭಗೊಂಡಿವೆ. ಸಂಧಾನವೇ ಬೇಡವೆನ್ನುತ್ತಿದ್ದವರು, ಸಂಧಾನ ನಡೆದರೂ ನಡೆಯಲಿ ಎಂಬ ಅರ್ಥದಲ್ಲಿ ಮಾತನಾಡಲಾರಂಭಿಸಿದ್ದಾರೆ.
ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ: ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸತೀಶ್ ಜಾರಕಿ ಹೊಳಿ, ಸದ್ಯಕ್ಕೆ ಈ ಅವಧಿಯಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ. ಹೊಸದಾಗಿ ಚುನಾವಣೆ ಬಂದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಬಗ್ಗೆ ಚರ್ಚೆಯಾಗಲಿದೆ. ನಾನೂ ಸಿಎಂ ಹುದ್ದೆ ಆಕಾಂಕ್ಷಿಯಾಗಿರಬಹುದು. ಆದರೆ ರೈಲಿನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿ ಕಾದು ಕುಳಿತಿರುವವರಂತೆ ನಾವೂ ಕಾದು ಕುಳಿತಿದ್ದೇವೆ ಎಂದು ಹೇಳಿದರು.