ನವದೆಹಲಿ,ಮೇ9-ಕಳೆದ ಐದು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ವಿಶ್ವದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಕನ್ನಡಿಗರು ಬಿಜೆಪಿಗೆ ಮತ ಹಾಕಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ಮನವಿ ಮಾಡಿದರು.
ಇದೇ 12ರಂದು ಹರಿಯಾಣದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರುಗಾಂವ್‍ನಲ್ಲಿ ಹಮ್ಮಿಕೊಂಡಿದ್ದ ಕನ್ನಡಿಗರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
2014ರ ಚುನಾವಣಾ ಸಂದರ್ಭದಲ್ಲಿ ನಾವು ಜನತೆಗೆ ಪ್ರಣಾಳಿಕೆಯಲ್ಲಿ ಯಾವ ಆಶ್ವಾಸನೆಗಳನ್ನು ನೀಡಿದ್ದೆವೋ ಅವೆಲ್ಲವನ್ನು ಈಡೇರಿಸಿದ್ದೇವೆ. ಭ್ರಷ್ಟಾಚಾರ ಆಡಳಿತ, ಸುಸ್ಥಿರ ಸರ್ಕಾರ, ದೇಶದ ನಾಗರಿಕರ ಭದ್ರತೆ, ಸೇನೆ ಬಲಪಡಿಸುವುದು ನಮ್ಮ ಮುಖ್ಯ ಕಾರ್ಯಸೂಚಿಗಳಲ್ಲಿ ಒಂದಾಗಿತ್ತು.
ನುಡಿದಂತೆಯೇ ಪ್ರಧಾನಿಯವರು ಐದು ವರ್ಷಗಳಲ್ಲಿ ಒಂದೇ ಒಂದು ಹಗರಣಕ್ಕೆ ಅವಕಾಶವಿಲ್ಲದೆ ಆಡಳಿತ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು.
ದೇಶಕ್ಕೆ ಮೋದಿಯವರಂತಹ ಪ್ರಬಲ ನಾಯಕತ್ವದ ಅವಶ್ಯಕತೆ ಇದೆ. ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಸದೆಬಡೆಯಲು ಅವರು ತೆಗೆದುಕೊಂಡ ಗಟ್ಟಿ ನಿರ್ಧಾರಗಳಿಂದ ಪಾಕ್ ಬೆಂಬಲಿತ ಉಗ್ರರು ದೇಶದಲ್ಲಿ ಕಾಲಿಡಲು ಹೆದರುತ್ತಿದ್ದಾರೆ. ಹಿಂದೆ ರಾಜರೋಷವಾಗಿ ದಾಳಿ ಮಾಡುತ್ತಿದ್ದ ಉಗ್ರರು ಇಂದು ಮೋದಿ ಕಾರಣಕ್ಕೆ ಗಡಿ ಒಳನುಸುಳುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.
ದೇಶದ ಯಾವುದೇ ಭಾಗ ಇಲ್ಲವೆ ಸೇನೆಯ ಮೇಲೆ ದಾಳಿಯಾದರೆ ತಕ್ಷಣವೇ ಅದಕ್ಕೆ ಪ್ರತ್ಯುತ್ತರ ನೀಡುವ ಸಾಮಥ್ರ್ಯ ಮೋದಿಯವರಿಗಿದೆ.
ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದ ತಕ್ಷಣವೇ ಪಾಕ್ ಆಕ್ರಮಿತ ಬಾಲ್‍ಕೋಟ್‍ನ ಉಗ್ರರ ಶಿಬಿರ ಮೇಲೆ ದಾಳಿ ನಡೆಸಿ ಭಾರತದ ಶಕ್ತಿ ಸಾಮಥ್ರ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಮತ್ತೊಮ್ಮೆ ಮೋದಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಶಪಥ ಮಾಡಬೇಕೆಂದು ಮನವಿ ಮಾಡಿದರು.
ಗುರುಗಾಂವ್‍ನಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆ ಮಾಡಬೇಕು. ಈ ಬಾರಿ ಸರ್ಕಾರ ರಚನೆಯಲ್ಲಿ ಒಂದೊಂದು ಕ್ಷೇತ್ರಗಳು ಕೂಡ ನಿರ್ಣಾಯಕ ಪಾತ್ರ ವಹಿಸಿರುವುದರಿಂದ ಮೋದಿ ಕೈ ಬಲಪಡಿಸುವಂತೆ ಕನ್ನಡಿಗರಿಗೆ ಕೋರಿಕೊಂಡರು.
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಿ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲು ನೀವು ನಮಗೆ ಶಕ್ತಿ ತುಂಬಬೇಕು. 12ರಂದು ನಡೆಯುವ ಮತದಾನದ ವೇಳೆ ಕೇವಲ ನೀವು ಮಾತ್ರವಲ್ಲದೆ ಅಕ್ಕಪಕ್ಕದ ನಿವಾಸಿಗಳನ್ನು ಕೂಡ ಮತಗಟ್ಟೆಗೆ ಕರೆತನ್ನಿ ಎಂದು ಲಿಂಬಾವಳಿ ಮನವಿ ಮಾಡಿದರು.
ಈ ವೇಳೆ ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್ ಹಾಗೂ ಗುರುಗಾಂವ್‍ನ ಸಾವಿರಾರು ಸಂಖ್ಯೆಯ ಕನ್ನಡಿಗರು ಭಾಗವಹಿಸಿದ್ದರು.