ಮಳೆಗಾಲದಲ್ಲಿ ಎದುರಾಗುವ ಅನಾಹುತ ತಪ್ಪಿಸುವ ಹೊಣೆ-24 ಸಹಾಯಕ ಕಾರ್ಯಪಾಲಕ ಅಭಿಯಂತರರ ಜವಬ್ದಾರಿ

ಬೆಂಗಳೂರು, ಮೇ 9-ಮಳೆಗಾಲದಲ್ಲಿ ಎದುರಾಗುವ ಅನಾಹುತ ತಪ್ಪಿಸುವ ಹೊಣೆಯನ್ನು ಬೃಹತ್ ರಸ್ತೆ ಕಾಮಗಾರಿ ವಿಭಾಗದ 24 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲಾಗಿದೆ. ಯಾವುದೇ ಅವಘಡ ಸಂಭವಿಸಿದರೆ ಆ ಇಂಜಿನಿಯರ್‍ಗಳನ್ನು ನೇರ ಜವಾಬ್ದಾರಿಗಳನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 1800 ಕಿ.ಮೀ. ಸುತ್ತಳತೆಯ ಬೃಹತ್ ರಸ್ತೆಗಳಿದ್ದು, ಅದರ ನಿರ್ವಹಣೆಗೆ 24 ಸಹಾಯಕ ಕಾರ್ಯಪಾಲಕ ಅಭಿಯಂತರರಿದ್ದಾರೆ.ಇವರುಗಳಿಗೆ ಮಳೆ ಅನಾಹುತ ತಪ್ಪಿಸುವ ಹೊಣೆ ನೀಡಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬ ಎಇಇಗೆ 50 ಕಿ.ಮೀ. ರಸ್ತೆ ಬರಲಿದೆ.ಆ ರಸ್ತೆ ನಿರ್ವಹಣೆಗೆ ಅವರು ತಲಾ 10 ಜನರ ಟೀಮ್ ಮಾಡಿಕೊಂಡು ಮಳೆ ಅನಾಹುತ ತಪ್ಪಿಸಲು ಕಾರ್ಯಪ್ರವೃತ್ತರಾಗಬೇಕು.ಇದುವರೆಗೂ ಬೃಹತ್ ರಸ್ತೆ ಕಾಮಗಾರಿಯ ಎಇಇಗಳು ರಸ್ತೆ ನಿರ್ವಹಣೆ ಮಾತ್ರ ಮಾಡುತ್ತಿದ್ದರು. ಮಳೆ ಅನಾಹುತವನ್ನು ವಾರ್ಡ್ ಇಂಜಿನಿಯರ್‍ಗಳು ನೋಡುತ್ತಿದ್ದರು. ಆದರೆ ವಾರ್ಡ್ ಇಂಜಿನಿಯರ್‍ಗಳ ವ್ಯಾಪ್ತಿ ಚಿಕ್ಕದಾದ್ದರಿಂದ ಅವರು ಇತರೆ ವಾರ್ಡ್‍ಗಳ ಕಡೆ ನೋಡುತ್ತಿರಲಿಲ್ಲ. ಹಾಗಾಗಿ ಬೃಹತ್ ಕಾಮಗಾರಿ ವಿಭಾಗದ ಎಇಇಗಳಿಗೆ ವಹಿಸಿದ್ದೇವೆ ಎಂದರು.

ಚರಂಡಿಯಲ್ಲಿ ಹೂಳು ತುಂಬಿರುವುದು, ರಸ್ತೆಯಲ್ಲಿ ನೀರು ನಿಂತಿರುವುದು, ಸ್ವಚ್ಛತೆ ಸೇರಿದಂತೆ ಮಳೆ ಇರಲಿ, ಇಲ್ಲದಿರಲಿ ಎಲ್ಲ ನಿರ್ವಹಣೆಯನ್ನು ಎಇಇಗಳೇ ವಹಿಸಿಕೊಳ್ಳಬೇಕು.

ಬಿಬಿಎಂಪಿಯಲ್ಲಿ 9 ಕಸಗುಡಿಸುವ ಯಂತ್ರಗಳಿವೆ. ಜತೆಗೆ 17 ಹೊಸ ಯಂತ್ರಗಳನ್ನು ಖರೀದಿಸುತ್ತೇವೆ. ಇವುಗಳನ್ನು 24 ಎಇಇಗಳಿಗೆ ಕೊಡುತ್ತೇವೆ. ಗಾರ್ಬೇಜ್, ರಸ್ತೆ ನಿರ್ವಹಣೆ, ಚರಂಡಿ ಸ್ವಚ್ಛತೆ ಅವರೇ ಮಾಡಿಸಬೇಕು.ಇದಕ್ಕೆ ತಪ್ಪಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಇತ್ತೀಚೆಗೆ ಮಳೆ ಬಿದ್ದಾಗ ಅತಿ ಹೆಚ್ಚು ಮರಗಳು ಉರುಳಿದ್ದವು. ಶಿಥಿಲವಾದ ಮರಗಳನ್ನು ತೆರವುಗೊಳಿಸಲು ಪಾಲಿಕೆ ಅರಣ್ಯ ವಿಭಾಗದಲ್ಲಿ 21 ತಂಡಗಳಿವೆ. ಇದರ ಜತೆಗೆ ಇನ್ನೂ ಏಳು ತಂಡಗಳನ್ನು ಸೇರ್ಪಡೆ ಮಾಡುತ್ತೇವೆ. ನಗರದ 28 ವಿಧಾನಸಭಾ ಕ್ಷೇತ್ರಗಳಿಗೂ ಒಂದೊಂದು ತಂಡವನ್ನು ನಿಯೋಜಿಸುತ್ತೇವೆ. ಹಾಗಾಗಿ ಈ ತಂಡಗಳು ಮಳೆ ಸಂದರ್ಭದಲ್ಲಿ ಮರ ತೆರವುಗೊಳಿಸುವುದನ್ನು ಮಾಡುತ್ತವೆ. ಆಯಾ ಕ್ಷೇತ್ರಗಳ ಮುಖ್ಯ ಅಭಿಯಂತರರಿಗೆ ಇದರ ಉಸ್ತುವಾರಿ ವಹಿಸುತ್ತೇವೆ ಎಂದು ತಿಳಿಸಿದರು.

ನಗರದಲ್ಲಿ ಒಂದು ಕ್ಷೇತ್ರದಲ್ಲಿ ಹೆಚ್ಚು ಮಳೆಯಾದರೆ, ಇನ್ನೊಂದು ಕ್ಷೇತ್ರದಲ್ಲಿ ಮಳೆಯೇ ಆಗಿರುವುದಿಲ್ಲ. ಹಾಗಾಗಿ ಮಳೆ ಬೀಳದ ಕ್ಷೇತ್ರದಿಂದ ಹೆಚ್ಚು ಮಳೆ ಬೀಳುವ ಪ್ರದೇಶಕ್ಕೆ ತಕ್ಷಣ ಒಂದು ಟೀಮ್‍ಅನ್ನು ಕಳುಹಿಸಲಾಗುತ್ತದೆ.

ಮಳೆ ಆದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಲ್ಲಿ ಈಗಾಗಲೇ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಬಾರಿ ಮಳೆ ಆದಾಗ ಅಷ್ಟು ಅನಾಹುತ ಸಂಭವಿಸಲಿಲ್ಲ. ಉದಾಹರಣೆಗೆ ಎಚ್‍ಎಸ್‍ಆರ್ ಲೇಔಟ್ ಸೆಕ್ಟರ್‍ನಲ್ಲಿ ಈ ಹಿಂದೆ ಮಳೆ ಬಂದಾಗ ಆ ಪ್ರದೇಶ ಕೆರೆಯಂತಾಗಿಬಿಡುತ್ತಿತ್ತು. ಅಲ್ಲಿ ಮಳೆ ಕಾಮಗಾರಿ ಮಾಡಿದ್ದರಿಂದ ನಿನ್ನೆ ಮೊನ್ನೆ ಮಳೆ ಸುರಿದಾಗ ಅನಾಹುತ ಆಗಲಿಲ್ಲ ಎಂದು ಹೇಳಿದರು.

ಮಳೆ ನೀರು ಕಾಲುವೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತದೆ. ಹಾಗಾಗಿ ಇನ್ನು ಮುಂದೆ ಮಳೆ ಅನಾಹುತ ಆಗುವುದು ನಗರದಲ್ಲಿ ಕಡಿಮೆಯಾಗುತ್ತದೆ. ಮಳೆ ಅನಾಹುತ ತಪ್ಪಿಸಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ