ದಂತೇವಾಡ, ಮೇ 8- ಛತ್ತೀಸ್ಗಢದಲ್ಲಿ ನಕ್ಸಲರ ಬೇಟೆ ಕಾರ್ಯಾಚರಣೆಯನ್ನು ಯೋಧರು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ದಂತೇವಾಡ ಮತ್ತು ಸುಕ್ಮಾ ಜಿಲ್ಲೆಯ ಗುಂಡೆರೆಸ್ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ.
ಮೃತ ನಕ್ಸಲರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಂತೇವಾಡ ಜಿಲ್ಲೆಯ ಅರಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 30ಶಿಬಿರಗಳಲ್ಲಿ ನಕ್ಸಲರು ವಾಸ್ತವ್ಯ ಹೂಡಿದ್ದಾರೆ. ಕುಖ್ಯಾತ ನಕ್ಸಲರಾದ ಶಾಮ್, ದೇವರ ಮತ್ತು ವಿನೋದ್ ಸಹ ಶಿಬಿರದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಿನ್ನೆ ಮಧ್ಯರಾತ್ರಿಯಿಂದಲೇ ಜಿಲ್ಲಾ ಮೀಸಲು ರಕ್ಷಣಾ ದಳ (ಡಿಆರ್ಜಿ) ಮತ್ತು ವಿಶೇಷ ಕಾರ್ಯಪಡೆ (ಎಸ್ಟಿಎಫ್) ಜಂಟಿ ತಂಡ ಅಲ್ಲಿಗೆ ತೆರಳಿದಾಗ ಗುಂಡಿ ಚಕಮಕಿ ನಡೆಯಿತು.
ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಹತರಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಗುಂಡಿನ ಚಕಮಕಿ ವೇಳೆ ತಪ್ಪಿಸಿಕೊಂಡಿರುವ ಕೆಲವು ನಕ್ಸಲರಿಗೆ ತೀವ್ರ ಗಾಯಗಳಾಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಹತ ನಕ್ಸಲರಿಂದ ಇನ್ಸಾಸ್ ರೈಫಲ್ ಮತ್ತು 12ಬೋರ್ ಬಂದೂಕುಗಳು ನಕ್ಸಲ್ ಸಾಹಿತ್ಯ, ಕೆಲವು ನಕ್ಷೆಗಳು ಮತ್ತು ದಿನಬಳಕೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪರಾರಿಯಾಗಿರುವ ನಕ್ಸಲರಿಗಾಗಿ ಈ ಅರಣ್ಯ ಪ್ರದೇಶ ಸುತ್ತಮುತ್ತ ವ್ಯಾಪಕ ಶೋಧ ಮುಂದುವರೆದಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮೀಸಲು ರಕ್ಷಣಾ ದಳದ ಮಹಿಳಾ ಕಮಾಂಡೋಗಳೂ ಸಹ ಪಾಲ್ಗೊಂಡಿದ್ದರು.