ನಾಳೆ ಮಾಜಿಯೋಧ ತೇಜ್ ಬಹದ್ದೂರ್ ಅರ್ಜಿ ವಿಚಾರಣೆ

ನವದೆಹಲಿ, ಮೇ. 8- ಪ್ರತಿಷ್ಠಿತ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ತಮ್ಮನ್ನು ಅನರ್ಹಗೊಳಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಮಾಜಿಯೋಧ ತೇಜ್ ಬಹದ್ದೂರ್ ಯಾದವ್ ಸಲ್ಲಿಸಿದ್ದ ಅರ್ಜಿ ನಾಳೆ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ.

ಸೇನೆಯಿಂದ ವಜಾಗೊಂಡ ಯಾದವ್ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಸೇನೆಯಿಂದ ವಜಾಗೊಂಡವರು ಐದು ವರ್ಷ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬ ಕಾನೂನು ಉಲ್ಲೇಖಿಸಿ ಚುನಾವಣಾ ಆಯೋಗ ಅವರ ಸ್ಪರ್ಧೆಯನ್ನು ಅಸಿಂಧುಗೊಳಿಸಿತ್ತು.

ಇದರಿಂದ ತೀವ್ರ ಅಸಮಾಧಾನಗೊಂಡ ಯಾದವ್ ಸುಪ್ರೀಂ ಕೋರ್ಟ್ ಮನವಿ ಸಲ್ಲಿಸಿ ತಮ್ಮ ಸ್ಪರ್ಧೆಗೆ ಅವಕಾಶ ನೀಡಬೇಕೆಂದು ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ನಾಳೆಗೆ ವಿಚಾರಣೆಗೆ ಬರಲಿದೆ.

ಭಾರತೀಯ ಸೇನಾಪಡೆಯ ಯೋಧರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ತೇಜ್ ಬಹದ್ದೂರ್ ಯಾದವ್ ಕಳೆದ ವರ್ಷ ಸೋಡಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡಿದ್ದರು. ಇದು ದೇಶಾದ್ಯಂತ ಭಾರೀ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು.

ಯಾದವ್ ವಿರುದ್ಧ ಸೇನಾಧಿಕಾರಿಗಳು ಕೆಂಡಾಮಂಡಲವಾಗಿದ್ದರು. ಈ ಪ್ರಕರಣ ನಂತರ ಉನ್ನತಾಧಿಕಾರಿಗಳೊಂದಿಗೆ ವೈಮನಸ್ಯ ಹೊಂದಿದ್ದ ಯೋಧ ಅವರ ವಿರುದ್ಧ ತಿರುಗಿ ಬಿದ್ದು ಕೆಲವು ವಿವಾದಗಳಿಗೂ ಗುರಿಯಾಗಿದ್ದರು. ನಂತರ ಯಾದವ್‍ನನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು.

ಪ್ರಧಾನಿ ಮೋದಿ ವಿರುದ್ಧ ಹಗೆ ಕಾರುತ್ತಿದ್ದ ಯಾದವ್ ವಾರಣಾಸಿಯಿಂದ ಲೋಕಸಭೆಗೆ ಸ್ಪರ್ಧೆ ಬಯಸಿದ್ದರು. ಅವರ ಸ್ಪರ್ಧೆಯನ್ನು ಆಯೋಗ ಅನರ್ಹಗೊಳಿಸಿದ ನಂತರ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. 50ಕೋಟಿ ರೂ.ಗಳನ್ನು ನೀಡಿದರೆ. ಮೋದಿಯನ್ನು ಹತ್ಯೆ ಮಾಡುತ್ತೇನೆ ಎಂದು ಯಾದವ್ ಹೇಳಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ