ನವದೆಹಲಿ, ಮೇ 8- ಹದಿನೇಳನೆ ಲೋಕಸಭೆಗೆ ನಡೆಯುತ್ತಿರುವ ಏಳು ಹಂತಗಳ ಮಹಾಚುನಾವಣೆಯ ಆರನೇ ಹಂತದ ಮತದಾನಕ್ಕೆ ಅಖಾಡ ಮತ್ತಷ್ಟು ರಂಗೇರಿದೆ.
ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮತ್ತು ಹರಿಯಾಣ ಈ ಏಳು ರಾಜ್ಯಗಳಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಸೇರಿದಂತೆ ಅನೇಕ ತಾರಾ ಪ್ರಚಾರಕರು ಭರ್ಜರಿ ರೋಡ್ ಶೋ ಚುನಾವಣಾ ರ್ಯಾಲಿಗಳಲ್ಲಿ ನಿರತರಾಗಿ ಮತದಾರರನ್ನು ಓಲೈಸುತ್ತಿದ್ದಾರೆ.
ಮೋದಿ ಇಂದು ಹರಿಯಾಣದ ಫತೇಬಾದ್ನಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಂದಿನಂತೆ ವಿಪಕ್ಷಗಳ ವಿರುದ್ಧ ಹರಿಹಾಯ್ದರು. ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಬಿಜೆಪಿಗೆ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಇಂದು ರಾಜಧಾನಿ ದೆಹಲಿಯ ರಾಮಲೀಲ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ರಾತ್ರಿ 7 ಗಂಟೆಗೆ ಈ ರ್ಯಾಲಿ ನಡೆಯಲಿದ್ದು, ಲಕ್ಷಾಂತರ ಜನರ ಭಾಗವಹಿಸುವ ನಿರೀಕ್ಷೆ ಇದೆ.
ಅಮಿತ್ ಶಾ ಇಂದು ಜಾರ್ಖಂಡ್ನ ಧನಬಾದ್ನಲ್ಲಿ ಭರ್ಜರಿ ರೋಡ್ಶೋ ನಡೆಸಿ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಸದೃಢ ಸರ್ಕಾರ ಮತ್ತು ಜನರ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕುವಂತೆ ಅವರು ಮನವಿ ಮಾಡಿದರು.
ಗುರುಗ್ರಾಮದಲ್ಲಿ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರ ಗದ್ದುಗೆಗೇರಲಿದೆ ಎಂದು ಭವಿಷ್ಯ ನುಡಿದರು.
ಮಧ್ಯಪ್ರದೇಶದಲ್ಲಿ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಬುರಿಸಿನ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಬಿಂಧ್, ಮೊರೆನಾ, ಗ್ವಾಲಿಯಾರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೋಡ್ಶೋ ನಡೆಸಿದ ರಾಹುಲ್ ಕಾಂಗ್ರೆಸ್ ಪರ ಮತಯಾಚಿಸಿದರು.