ಮಾಜಿ ಸಿ.ಎಂ.ಸಿದ್ದರಾಮಯ್ಯ ಮತ್ತೆ ಸಿ.ಎಂ ಆಗಬೇಕು-ಮೈತ್ರಿ ಸರ್ಕಾರಕ್ಕೆ ಬಿಸಿ ತುಪ್ಪವಾದ ಹೇಳಿಕೆ

ಬೆಂಗಳೂರು, ಮೇ 8-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಕಾಂಗ್ರೆಸ್ ಪಾಳಯದಲ್ಲಿ ಎದ್ದಿರುವ ಅಕಾಲಿಕ ಕೂಗು ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಬಹುತೇಕ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೋಡಲು ಬಯಸುವುದಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸಿದ್ದರಾಮಯ್ಯ5 ವರ್ಷದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರು, ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಹೊಗಳುತ್ತಿರುವುದು ಪರೋಕ್ಷಾಗಿ ಈಗಿನ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂಬ ಅರ್ಥದಲ್ಲಿದೆ.

ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಮಾತಿನ ಅರ್ಥ ಎಂದು ನೀಡುತ್ತಿರುವವರು ಸ್ಪಷ್ಟನೆ ಕೊಡುತ್ತಿದ್ದರೂ ಅಕಾಲಿಕವಾದ ಈ ಚರ್ಚೆಯ ಹಿಂದಿನ ಮರ್ಮ ನಾನಾ ಅರ್ಥಗಳನ್ನು ಕಲ್ಪಿಸಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬದಲಾವಣೆಯಾಗಲಿವೆ ಎಂದು ಈಗಾಗಲೇ ಹಲವಾರು ನಾಯಕರು ಹೇಳಿಕೆ ನೀಡಿದ್ದರು.

ಅದಕ್ಕೆ ಪೂರಕ ಎಂಬಂತೆ ಲೋಕಸಭೆ ಚುನಾವಣೆ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಪರವಾಗಿ ಎದ್ದಿರುವ ಕೂಗು ಜೆಡಿಎಸ್ ನಾಯಕರಲ್ಲಿ ಅಸಹನೆ ಹುಟ್ಟುಹಾಕಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಈ ಬೆಳವಣಿಗೆಯಿಂದ ಸಿಡಿಮಿಡಿಗೊಳ್ಳುವಂತಾಗಿದೆ.

ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಅವಕಾಶ ಮತ್ತು ಅಧಿಕಾರಗಳನ್ನು ನೀಡಿದೆ. ಪೂರ್ಣಪ್ರಮಾಣದ ಬಹುಮತ ಇರುವ ಸರ್ಕಾರದ ನಾಯಕತ್ವ ವಹಿಸಿದ್ದ ಸಿದ್ದರಾಮಯ್ಯ ಅವರು ಸಾಕಷ್ಟು ಒಳ್ಳೆಯ ಯೋಜನೆಗಳನ್ನು ತಂದಿದ್ದಾರೆ. ಜನಪರ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲವನ್ನೂ ನೀಡಿದೆ. ಮತ್ತೊಮ್ಮೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗುವುದಾದರೆ ಮೂಲ ಕಾಂಗ್ರೆಸ್ಸಿಗರು ಏನಾಗಬೇಕು ಎಂಬ ಪ್ರಶ್ನೆಗಳು ಎದ್ದಿವೆ.

ಇದೆಲ್ಲಕ್ಕಿಂತಲೂ ಮುಖ್ಯವಾಗಿ ಸಮ್ಮಿಶ್ರ ಸರ್ಕಾರದ ಸೌಹಾರ್ದತೆಗೆ ಕಾಂಗ್ರೆಸ್ ಸಚಿವರು, ಶಾಸಕರ ಹೇಳಿಕೆಗಳು ಧಕ್ಕೆ ತರುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಎಂ.ಬಿ.ಪಾಟೀಲ್ ಅವರಂತಹ ಸಚಿವರುಗಳು ಅಧಿಕಾರದಲ್ಲಿದ್ದುಕೊಂಡೇ ಸರ್ಕಾರಕ್ಕೆ ಇರಿಸು-ಮುರಿಸಾಗುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಶಾಸಕ ಸುಧಾಕರ್ ಅವರು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದು, ಉದ್ದೇಶಪೂರ್ವಕವಾಗಿಯೇ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾತುಗಳನ್ನಾಡುತ್ತಿದ್ದಾರೆ.ಇದಕ್ಕೂ ಮೊದಲು ಶಾಸಕರಾದ ಎಸ್.ಟಿ.ಸೋಮಶೇಖರ್, sಭೈರತಿ ಬಸವರಾಜ್, ಮಾಜಿ ಸಚಿವ ರಮೇಶ್‍ಜಾರಕಿ ಹೊಳಿ ಸೇರಿದಂತೆ ಹಲವಾರು ಮಂದಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಹೇಳಿಕೆಗಳನ್ನು ನೀಡಿದ್ದರು.

ಸಮ್ಮಿಶ್ರ ಸರ್ಕಾರದ ಆರಂಭದಲ್ಲಿ ಒಂದಷ್ಟು ದಿನ ನಡೆದ ಚರ್ಚೆ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದಂತಾಗಿತ್ತು. ಕೆಲ ಶಾಸಕರು ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದುಕೊಂಡು ಮುಂಬೈ ಹಾಗೂ ಇತರ ರಾಜ್ಯಗಳ ಹೊಟೇಲ್‍ಗಳಲ್ಲಿ ಅಡಗಿ ಕುಳಿತಿದ್ದರು. ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಎದುರಾಯಿತು ಎಂಬ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಚಾಟಿ ಬೀಸಿದ್ದರಿಂದಾಗಿ ಇದ್ದಕ್ಕಿದ್ದಂತೆ ಎಲ್ಲಾ ಬೆಳವಣಿಗೆಗಳು ತಣ್ಣಗಾದವು.

ಲೋಕಸಭೆ ಚುನಾವಣೆ ಬಳಿಕ ದೋಸ್ತಿ ಸರ್ಕಾರ ಇರುವುದಿಲ್ಲ ಎಂದು ಸಿದ್ದರಾಮಯ್ಯ ಅವರೇ ತಮ್ಮ ಆಪ್ತರ ಬಳಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಾತನಾಡಿಕೊಂಡಿದ್ದರು. ಈಗ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಚರ್ಚೆಗಳು ಒಂದಕ್ಕೊಂದು ತಾಳೆಯಾಗುತ್ತಿವೆ. ಮೇಲ್ನೋಟಕ್ಕೆ ಎಷ್ಟೇ ಆತ್ಮೀಯವಾಗಿ ವೇದಿಕೆಯ ಮೇಲೆ ಕೈ ಜೋಡಿಸಿದರೂ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಿನ ರಾಜಕೀಯ ಮುಸುಕಿನ ಗುದ್ದಾಟ ಸಂಪೂರ್ಣವಾಗಿ ನಿಂತಂತಿಲ್ಲ. ಜೆಡಿಎಸ್‍ನ ನಾಯಕರು ಸಿದ್ದರಾಮಯ್ಯ ಅವರ ಹೆಸರು ಕೇಳಿದರೆ ಸಿಡಿಮಿಡಿಗೊಳ್ಳುವುದು ಸಾಮಾನ್ಯವಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಮೂಲದಿಂದಲೇ ಸಿಡಿಮಿಡಿ ಹೆಚ್ಚಿಸುವಂತಹ ಹೇಳಿಕೆಗಳು ಹೊರಬರುತ್ತಿರುವುದು ವಿಪರ್ಯಾಸವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ