ಬೆಂಗಳೂರು, ಮೇ.8- ನಿನ್ನೆ ರಾತ್ರಿ ಸುರಿದ ಗುಡುಗು-ಸಿಡಿಲು ಸಹಿತ ಮಳೆಯಿಂದ ನಗರದಲ್ಲಿ ಸಾಕಷ್ಟು ಅನಾಹುತಗಳಾಗಿದ್ದು ಮೇಯರ್ ಗಂಗಾಂಬಿಕೆ ಭದ್ರಪ್ಪಾ ಲೇಔಟ್ ಮತ್ತಿತರೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಕಂಡು ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿಗಳಲ್ಲಿ ನಿಂತು ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ಸ್ಥಳೀಯರು ಮೇಯರ್ಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದನ್ನು ಪರಿಶೀಲಿಸಿದ ವೇಳೆ ಸ್ಥಳೀಯರು ಮೇಯರ್ ಅವರನ್ನು ತರಾಟೆಗೆ ತೆಗೆದುಕೊಂಡು ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ.ಬರೀ ಹಳ್ಳ-ಕೊಳ್ಳಗಳೇ ತುಂಬಿಕೊಂಡಿವೆ. ದ್ವಿಚಕ್ರವಾಹನಗಳು ಸಂಚರಿಸುವಾಗ ಗುಂಡಿಗೆ ಬಿದ್ದು ಗಾಯಗೊಳ್ಳಬೇಕಾಗುತ್ತದೆ ಎಂದು ಕಿಡಿಕಾರಿದರು.
ಮಳೆ ಬಂದಾಗ ಚರಂಡಿ ಕ್ಲಿನ್ ಮಾಡಲು ಅಧಿಕಾರಿಗಳು ಬರುತ್ತಾರೆ.ಕಾಮಗಾರಿಯನ್ನು ಮಳೆ ಬರುವುದಕ್ಕು ಮುನ್ನವೇ ಮಾಡುವುದಿಲ್ಲ. ಅಲ್ಲದೆ ಕಳಪೆ ಕಾಮಗಾರಿ ಮಾಡಿರುವುದರಿಂದ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ನಾವುಗಳು ತೊಂದರೆ ಅನುಭವಿಸಬೇಕು ಎಂದು ಮಹಿಳೆಯರು ಬೇಸರ ವ್ಯಕ್ತಪಡಿಸಿದರು.
ಮೇಯರ್ ಗುತ್ತಿಗೆದಾರರಿಗೆ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಚರಂಡಿ ಹೂಳು ತೆಗೆಯುವ ಕೆಲಸವನ್ನು ತಕ್ಷಣ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.ಯಾವುದೇ ರಸ್ತೆಯಲ್ಲಾಗಲಿ ಗುಂಡಿ ಇರಬಾರದು ಮತ್ತು ಚರಂಡಿ ಹೂಳು ತೆಗೆದು ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಎಲ್ಲೂ ಕಳಪೆ ಕಾಮಗಾರಿಯಾಗಿರ ಕೂಡದು ಎಂದು ಇಂಜಿನಿಯರ್ಗಳಿಗೆ ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದರು.
ಪರಿಶೀಲನೆ ವೇಳೆ ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಸಾಥ್ ನೀಡಿದರು.