
ಬೆಂಗಳೂರು, ಮೇ 8- ಮೈತ್ರಿ ಸರ್ಕಾರದ ನಡುವೆ ಆಗಾಗ ಉಂಟಾಗುವ ಗೊಂದಲಗಳನ್ನು ಬಗೆಹರಿಸಲೆಂದೇ ರಚಿತವಾಗಿರುವ ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಪ್ರಾತಿನಿಧ್ಯ ಕಡಿಮೆಯಾಗಿದೆ.ಸಮಿತಿಯಲ್ಲಿ ಜೆಡಿಎಸ್ ಪ್ರಾತಿನಿಧ್ಯ ಹೆಚ್ಚಿಸಲು ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಈ ಸಂಬಂಧ ಕಾಂಗ್ರೆಸ್-ಜೆಡಿಎಸ್ ನಾಯಕರು ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.
ಪ್ರಸಕ್ತ ಲೋಕಸಭೆ ಚುನಾವಣೆಗೆ ಮತದಾನ ನಡೆದ ಬೆನ್ನಲ್ಲೇ ರಾಜ್ಯದ ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ನಡುವೆ ಗೊಂದಲಕರ ಹೇಳಿಕೆಗಳು ಹೊರಬರುತ್ತಿದ್ದು, ಇದನ್ನು ಬಗೆಹರಿಸಲು ಚುನಾವಣಾ ಫಲಿತಾಂಶದ ನಂತರ ಸಮನ್ವಯ ಸಮಿತಿ ಸಭೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿಯಲ್ಲಿ ಈಗ ಜೆಡಿಎಸ್ ಪ್ರಾತಿನಿಧ್ಯ ಕುಗ್ಗಿದೆ.ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಡ್ಯಾನಿಷ್ ಆಲಿ ಈಗ ಪಕ್ಷ ಬಿಟ್ಟು ಬಿಎಸ್ಪಿ ಸೇರ್ಪಡೆಯಾಗಿದ್ದಾರೆ.ಸಮನ್ವಯ ಸಮಿತಿಯ ಸಂಚಾಲಕರಾಗಿದ್ದ ಡ್ಯಾನಿಷ್ ಆಲಿ ಅವರ ಸ್ಥಾನವನ್ನು ಜೆಡಿಎಸ್ನಿಂದ ಇದುವರೆಗೂ ಯಾರೂ ತುಂಬಿಲ್ಲ.ಆ ಸ್ಥಾನ ಹಾಗೆಯೇ ಖಾಲಿ ಉಳಿದಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸಮನ್ವಯ ಸಮಿತಿ ಸಭೆ ನಡೆಸಿ ಮೈತ್ರಿ ಸರ್ಕಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿನ ಗೊಂದಲಗಳನ್ನು ಬಗೆಹರಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಆದರೆ, ಜೆಡಿಎಸ್ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬರೇ ಸಮನ್ವಯ ಸಮಿತಿಯಲ್ಲಿದ್ದಾರೆ.ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸೇರಿ ಮೂರು ಮಂದಿ ಸಮನ್ವಯ ಸಮಿತಿಯಲ್ಲಿದ್ದಾರೆ. ಹೀಗಾಗಿ ಜೆಡಿಎಸ್ನಿಂದ ಮುಖ್ಯಮಂತ್ರಿ ಒಬ್ಬರೇ ಸಾಕೆ ಎಂಬ ಪ್ರಶ್ನೆ ರಾಜಕೀಯವಾಗಿ ಚರ್ಚೆಯಾಗುತ್ತಿದೆ.
ಜೆಡಿಎಸ್ನಿಂದ ಸಮನ್ವಯ ಸಮಿತಿಗೆ ಸೇರ್ಪಡೆಯಾಗಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರ ಹೆಸರುಗಳು ಕೇಳಿಬರುತ್ತಿವೆಯಾದರೂ ಇನ್ನೂ ಅಂತಿಮಗೊಂಡಿಲ್ಲ. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾದಾಗಲೇ ಸಮನ್ವಯ ಸಮಿತಿಗೆ ತಮ್ಮನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಪ್ರಸ್ತಾಪ ಮುಂದಿಟ್ಟಿದ್ದರು.
ಮೈತ್ರಿ ಸರ್ಕಾರ ಇರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ನ ರಾಜ್ಯಾಧ್ಯಕ್ಷರುಗಳು ಸಮಿತಿಯಲ್ಲಿರಬೇಕು. ಉಭಯ ಪಕ್ಷಗಳ ನಡುವೆ ಗೊಂದಲ ಉಂಟಾದಾಗ ಸಮನ್ವಯತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ವಿಶ್ವನಾಥ್ ಈ ಹಿಂದೆಯೇ ಹೇಳಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗಲಿ, ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರಾಗಲಿ ಇದುವರೆಗೂ ಸಮನ್ವಯ ಸಮಿತಿಯಲ್ಲಿ ಸ್ಥಾನ ಪಡೆದಿಲ್ಲ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಡೆಯುವ ಸಮನ್ವಯ ಸಮಿತಿ ಸಭೆ ವೇಳೆಗೆ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರನ್ನು ಸೇರ್ಪಡೆ ಮಾಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರನ್ನು ಸೇರ್ಪಡೆ ಮಾಡಿಕೊಂಡರೂ ಮತ್ತೊಂದು ಸ್ಥಾನವನ್ನು ಜೆಡಿಎಸ್ಗೆ ನೀಡಬೇಕಾಗುತ್ತದೆ.