ಮೀರತ್/ಬಿಜ್ನೂರ್, ಮೇ. 8- ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಉತ್ತರಪ್ರದೇಶದ ಪೊಲೀಸ್ ಪೇದೆ ದೆಹಲಿಯ ತಿಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆಯ ಕೈದಿಯಾಗಿ ಪತ್ತೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ.
ಕಳೆದ ವರ್ಷ ನವೆಂಬರ್ 15ರಂದು ಒಂದು ತಿಂಗಳ ರಜೆ ಮೇಲೆ ತೆರಳಿದ್ದ ಬಿಜ್ನೂರ್ನ ಬಧಾ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಕನ್ವರ್ ಪಾಲ್ಸಿಂಗ್(55) ಈಗ ಜೈಲಿನಲ್ಲಿ ಆಜೀವ ಶಿಕ್ಷೆ ಅನುಭವಿಸುತ್ತಿರುವ ಕೈದಿ ಎಂಬ ವಿಷಯ ತಿಳಿದು ಆತನ ಸಹದ್ಯೋಗಿಗಳು ಸೇರಿದಂತೆ ಪೊಲೀಸ್ ಇಲಾಖೆ ಶಾಕ್ ಆಗಿದೆ.
1987ರ ಮೇ 22ರಂದು ಮೀರತ್ನ ಹಶೀಂಪುರನಲ್ಲಿ ನಡೆದ 42 ಮುಸ್ಲಿಮರ ಹತ್ಯಾಕಾಂಡ ಪ್ರಕರಣದಲ್ಲಿ ಸಿಂಗ್ ಶಾಮೀಲಾಗಿದ್ದ. ಈ ಪ್ರಕರಣ ಸಂಬಂಧ ಸಿಂಗ್ ಸೇರಿದಂತೆ 15 ಆರೋಪಿಗಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ನಡೆದ ವಿಚಾರಣೆ ಸಂದರ್ಭದಲ್ಲಿ ಕೆಲವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಬಧಾಪುರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕನ್ವರ್ ಪಾಲ್ ಸಿಂಗ್ ಹತ್ಯಾಕಾಂಡದ ಆರೋಪಿ ಎಂಬುದು ಸಹದ್ಯೋಗಿಗಳಿಗೆ ತಿಳಿದಿರಲಿಲ್ಲ. ಕಳೆದ ವರ್ಷ ನ. 15ರಂದು ಈತ ಒಂದು ತಿಂಗಳ ರಜೆ ಮೇಲೆ ತೆರಳಿದ್ದ.
ಡಿಸೆಂಬರ್ 15ರಂದು ಸಿಂಗ್ ಕರ್ತವ್ಯಕ್ಕೆ ಹಿಂದಿರುಗಬೇಕಿತ್ತು. ಆದರೆ ಈತ ಬಾರದ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇಲೆ ಉನ್ನತಾಧಿಕಾರಿಗಳು ಕ್ರಮ ಜರುಗಿಸಿದ್ದರು. 5 ತಿಂಗಳಾದರೂ ಈತ ಪತ್ತೆಯಾಗದ ಹಿನ್ನೆಲೆಯಲ್ಲಿ ಆತನನನ್ನು ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿತ್ತು.
ಸಿಂಗ್ ಸೇರಿದಂತೆ ಖುಲಾಸೆಗೊಂಡ ಕೆಲವು ಆರೋಪಿಗಳ ವಿರುದ್ಧ ಸಂತ್ರಸ್ಥರ ಕುಟುಂಬ ಮೇಲ್ವನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಇವರು ಕೂಡ ಹತ್ಯಾಕಾಂಡದಲ್ಲಿ ಆಪಾಧಿತರು ಎಂದು ತೀರ್ಪು ನೀಡಿ ನ. 22ರ ಒಳಗೆ ಶರಣಾಗುವಂತೆ ನ್ಯಾಯಾಧೀಶರು ಸೂಚಿಸಿದ್ದರು.
ಕೋರ್ಟ್ ಆದೇಶ ನೀಡಿದ ದಿನಾಂಕ ಅಂದರೆ ನ. 22ಕ್ಕೆ ಒಂದು ವಾರ ಮುಂಚೆ ನ. 15ರಂದು ಸಿಂಗ್ ರಜೆ ಮೇಲೆ ತೆರಳಿ ನೇರವಾಗಿ ನ್ಯಾಯಾಲಯಕ್ಕೆ ಶರಣಾದ.
ಕೋರ್ಟ್ ಆಪಾದಿತನನ್ನು ಜೀವಾವಧಿ ಶಿಕ್ಷೆ ಮೇರೆಗೆ ತಿಹಾರಿ ಜೈಲಿಗೆ ಕಳುಹಿಸಿತ್ತು.
ಇದೇ ವೇಳೆ 5ತಿಂಗಳಾದರೂ ಪತ್ತೆಯಾಗದ ಸಿಂಗ್ ಬಗ್ಗೆ ವಿಚಾರಣೆ ನಡೆಸಿದ ಉನ್ನತ ಅಧಿಕಾರಿಗಳು ಆತನನ್ನು ಸೇವೆಯಿಂದ ವಜಾಗೊಳಿಸಿದ್ದರು. ಸಿಂಗ್ನನ್ನು ಪತ್ತೆ ಮಾಡಲು ಮುಂದಾದಾಗ ಆತ ಹಶೀಂಪುರ ನರಮೇಧ ಪ್ರಕರಣದಲ್ಲಿ 15 ಆಪಾದಿತರಲ್ಲಿ ಒಬ್ಬ ಎಂಬುದು ಪತ್ತೆಯಾಯಿತು. ನಂತರ ಶೋಧ ಮುಂದುವರೆಸಿದಾಗ ಸಿಂಗ್ ತಿಹಾರಿ ಜೈಲುವಾಸಿಯಾಗಿರುವುದು ತಿಳಿದು ಬಂತು. ಇದನ್ನು ತಿಳಿದ ಉನ್ನತ ಅಧಿಕಾರಿಗಳು ಬೆಚ್ಚಿಬಿದ್ದರು.
ಈತ ಉತ್ತರಪ್ರದೇಶದ ಪ್ರಾವಿನ್ಷಿಯಲ್ ಕ್ಯಾನ್ಸ್ಟೇಬಲರಿ ಕಮೀಟಿ (ಪಿಎಸಿ) ಮಾಜಿ ಸದಸ್ಯನಾಗಿದ್ದ. ಹಶೀಂಪುರನಲ್ಲಿ ನಡೆದ ಹತ್ಯಾಕಾಂಡದಲ್ಲಿ 42 ಪುರುಷರನ್ನು ಗುಂಡಿಕ್ಕಿ ಕೊಂದು ನದಿಗೆ ಎಸೆದ ಆಪಾದಿತರಲ್ಲಿ ಒಬ್ಬನು ಎಂಬುದು ಪತ್ತೆಯಾಯಿತು.