ನವದೆಹಲಿ: ಪ್ರತಿ ವಿಧಾನಸಭಾ ವಲಯದಲ್ಲಿ ಇವಿಎಂಗಳಿಗೆ ವಿವಿ ಪ್ಯಾಟ್ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವಂತೆ 21 ವಿರೋಧ ಪಕ್ಷಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಇಂದು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಮಂಗಳವಾರ ಬೆಳಗ್ಗೆ ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ವಿಚಾರಣೆ ಮುಗಿಸಿ, ನಾವು ಈ ಹಿಂದೆ ನೀಡಿರುವ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ, ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದೆ.
ಕಳೆದ ಏಪ್ರಿಲ್ 8ರಂದು ಸುಪ್ರೀಂಕೋರ್ಟ್, ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭಾ ವಲಯದಲ್ಲಿ ಕನಿಷ್ಠ ಐದು ಕಡೆ ಇವಿಎಂಗಳೊಂದಿಗೆ ವಿವಿ ಪ್ಯಾಟ್ಗಳನ್ನು ತಾಳೆ ಮಾಡುವ ವ್ಯವಸ್ಥೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.