ನೀತಿ ಸಂಹಿತೆ ಉಲ್ಲಂಘನೆ: ಎರಡು ಪ್ರಕರಣದಲ್ಲಿ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್

ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಗಳ ಪೈಕಿ ಮತ್ತೆ 2 ಪ್ರಕರಣಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಕ್ಲೀನ್ ಚಿಟ್ ದೊರೆತಿದೆ.

ಈ ಹಿಂದೆ ಅಂದರೆ ಏಪ್ರಿಲ್ 23ರಂದು ಪ್ರಧಾನಿ ಮೋದಿ ಅಹ್ಮದಾಬಾದ್ ನಲ್ಲಿ ನಡೆದಿದ್ದ ರೋಡ್ ಷೋ ಸಂದರ್ಭದ ಭಾಷಣ ಮತ್ತು ಏಪ್ರಿಲ್ 9ರಂದು ಕರ್ನಾಟಕದ ಚಿತ್ರದುರ್ಗದಲ್ಲಿ ನಡೆದಿದ್ದ ಪ್ರಚಾರ ಸಮಾವೇಶದಲ್ಲಿ ಮಾಡಿದ್ದ ಭಾಷಣಗಳಿಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ದೂರು ದಾಖಲಾಗಿತ್ತು. ಈ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ಚುನಾವಣಾ ಆಯೋಗ ಮೋದಿ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ಅಂಶಗಳಲ್ಲಿ ಎಂದು ಹೇಳಿದೆ. ಅಲ್ಲದೆ ಅವರಿಗೆ ಕ್ವೀನ್ ಚಿಟ್ ನೀಡಿದ್ದು, ಎರಡೂ ಪ್ರಕರಣಗಳ ಅರ್ಜಿಯನ್ನು ವಜಾಗೊಳಿಸಿದೆ.

ಅದರೊಂದಿಗೆ ಪ್ರಧಾನಿ ಮೋದಿ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಪೈಕಿ ಒಟ್ಟು 8 ಪ್ರಕರಣಗಳಲ್ಲಿ ಅವರಿಗೆ ಕ್ಲೀನ್ ಚಿಟ್ ದೊರೆತಂತಾಗಿದೆ. ಈ ಹಿಂದೆ ಮಹಾರಾಷ್ಟ್ರದ ಲಾತುರ್ ಜಿಲ್ಲೆಯಲ್ಲಿ ನಡೆದಿದ್ದ ಭಾಷಣದಲ್ಲೂ ಪ್ರಧಾನಿ ಮೋದಿ ಬಾಲಾಕೋಟ್ ವಾಯುದಾಳಿಯನ್ನು ಪ್ರಸ್ತಾಪಿಸಿದ್ದರು. ಈ ಪ್ರಕರಣದಲ್ಲೂ ಈ ಹಿಂದೆ ಮೋದಿಗೆ ಆಯೋಗ ಕ್ಲೀನ್ ಚಿಟ್ ನೀಡಿತ್ತು.

ಅಂತೆಯೇ ಮೋದಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ಇನ್ನೂ 2 ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಈ ಪ್ರಕರಣಗಳ ತೀರ್ಪನ್ನು ಆಯೋಗ ಇನ್ನೂ ಬಹಿರಂಗ ಪಡಿಸಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ