ಬೆಂಗಳೂರು, ಮೆ 7- ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ನಡೆಯುವ ನೀಟ್ ಪರೀಕ್ಷೆಯ ಮೂಲಕ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದು ಇದೀಗ ಪ್ರತಿವರ್ಷ ಶೇ.5ರಷ್ಟು ಮಕ್ಕಳು ಮಾತ್ರ ವೈದ್ಯಕೀಯ ಕೋರ್ಸ್ಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.
ಸರ್ಕಾರದ ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಇತ್ತೀಚಿನವರೆಗೂ ರಾಜ್ಯ ಸರ್ಕಾರವೇ ನಡೆಸುತ್ತಿದ್ದ ಸಿಇಟಿ ಪರೀಕ್ಷೆಗಳ ಮೂಲಕ ಕನಿಷ್ಟ ಪಕ್ಷ ರಾಜ್ಯದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು.
ಆದರೆ, ನೀಟ್ ಪದ್ಧತಿ ಜಾರಿಗೆ ಬಂದ ನಂತರ ಕರ್ನಾಟಕದ ನೂರು, ನೂರಿಪ್ಪತ್ತು ಮಂದಿ ಮಾತ್ರ ವೈದ್ಯಕೀಯ ಕೋರ್ಸುಗಳಲ್ಲಿ ಪ್ರವೇಶ ಪಡೆಯುತ್ತಿದ್ದು, ಪರಿಣಾಮವಾಗಿ ಕರ್ನಾಟಕಕ್ಕೆ ಮೇಜರ್ ಷಾಕ್ ಆದಂತಾಗಿದೆ.
ಸಿಇಟಿ ವ್ಯವಸ್ಥೆ ಜಾರಿಯಲ್ಲಿದ್ದಾಗ ಸರ್ಕಾರ ಹಾಗೂ ಖಾಸಗಿ ವೈದ್ಯಕೀಯ ಶಿಕ್ಷಣ ಕಾಲೇಜುಗಳ ಆಡಳಿತ ಮಂಡಳಿಯ ನಡುವೆ ಪರಸ್ಪರ ಮಾತುಕತೆಯ ಮೂಲಕ ಶೇಕಡಾವಾರು ಸೀಟು ಹಂಚಿಕೆಯಾಗುತ್ತಿತ್ತು.
ಈ ಪೈಕಿ ಶೇ.55 ಇಲ್ಲವೇ 60ರಷ್ಟು ಸೀಟುಗಳು ಸಿಇಟಿ ಪರೀಕ್ಷೆ ಬರೆದವರಿಗೆ ಲಭ್ಯವಾಗುತ್ತಿತ್ತಾದರೆ ಶೇ.40 ರಿಂದ 45ರಷ್ಟು ಸೀಟುಗಳು ಆಡಳಿತ ಮಂಡಳಿಗೆ ಸಿಗುತ್ತಿದ್ದವು.
ಮೂಲಗಳ ಪ್ರಕಾರ, ಇದರಿಂದ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 2800 ಸೀಟು ಲಭ್ಯವಾಗುತ್ತಿತ್ತಾದರೆ ಇದಕ್ಕೂ ಸ್ವಲ್ಪ ಕಡಿಮೆ ಪ್ರಮಾಣದ ಸೀಟುಗಳು ಆಡಳಿತ ಮಂಡಳಿಗಳಿಗೆ ದಕ್ಕುತ್ತಿದ್ದವು.
ಹೀಗೆ ತಮಗೆ ದಕ್ಕಿದ ಸೀಟುಗಳನ್ನು ಮ್ಯಾನೇಜ್ ಮೆಂಟ್ ಕೋಟಾದಡಿ ಮತ್ತು ಅನಿವಾಸಿ ಭಾರತೀಯರ ಕೋಟಾದಡಿ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಬೇರೆ ರಾಜ್ಯದ ಅಥವಾ ಬೇರೆ ದೇಶದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದರು.
ಇಷ್ಟಾದರೂ ಸಿಇಟಿ ಪರೀಕ್ಷೆ ಬರೆದ ರಾಜ್ಯದ ವಿದ್ಯಾರ್ಥಿಗಳು ಗಣನೀಯ ಪ್ರಮಾಣದ ಸೀಟುಗಳನ್ನು ಪಡೆಯುತ್ತಿದ್ದರು.ಆದರೆ ನೀಟ್ ವ್ಯವಸ್ಥೆ ಜಾರಿಗೆ ಬಂದ ನಂತರ ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಸೀಟುಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿದು ಹೋಗಿದೆ.
ಇದಕ್ಕೆ ಹಲವು ಕಾರಣಗಳಿದ್ದು, ಬಹುತೇಕರಿಗೆ ರಾಜ್ಯದಿಂದ ಹೊರ ಭಾಗದಲ್ಲಿ ಸೀಟುಗಳು ಸಿಗುತ್ತಿವೆ.ಇಂತಹ ಸಂದರ್ಭದಲ್ಲಿ ರಾಜ್ಯದ ವಿದ್ಯಾರ್ಥಿಗಳು ಹೊರರಾಜ್ಯಗಳಿಗೆ ಹೋಗಲು ಇಷ್ಟಪಡುತ್ತಿಲ್ಲ.
ದೂರದ ಪಂಜಾಬ್ಗೋ, ರಾಜಸ್ತಾನ.ಮಧ್ಯಪ್ರದೇಶ,ಒರಿಸ್ಸಾ,ಛತ್ತೀಸ್ಘಡದಂತಹ ರಾಜ್ಯಗಳಿಗೋ ಹೋಗಲು ರಾಜ್ಯದ ವಿದ್ಯಾರ್ಥಿಗಳು ಆಸಕ್ತಿ ವ್ಯಕ್ತಪಡಿಸುತ್ತಿಲ್ಲ.
ಹೀಗಾಗಿ ಹೊರರಾಜ್ಯಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ದಕ್ಕುವ 250-300ರಷ್ಟು ಸೀಟುಗಳ ಪೈಕಿ ಐವತ್ತೋ, ಅರವತ್ತೋ ಸೀಟುಗಳು ಮಾತ್ರ ಭರ್ತಿಯಾಗುತ್ತವೆ.
ಇನ್ನು ಕರ್ನಾಟಕದಲ್ಲಿ ಲಭ್ಯವಾಗುವ ಸೀಟುಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದರಿಂದ ಒಟ್ಟಾರೆಯಾಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಶೇ.5ಕ್ಕೆ ಕುಸಿದಿದೆ.
ರಾಜ್ಯದಲ್ಲಿ ಇದುವರೆಗೆ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 2800 ಸೀಟು ದಕ್ಕುತ್ತಿತ್ತು.ಹೀಗಾಗಿ ಮಕ್ಕಳು ನಿರಾತಂಕವಾಗಿ ಸೀಟು ಪಡೆಯಬಹುದಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕದ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವುದೇ ಕಡಿಮೆಯಾಗಿದ್ದು ಒಂದು ಬಗೆಯ ಆತಂಕ ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಯಾವ ಪರಿಹಾರೋಪಾಯಗಳನ್ನು ಕಂಡು ಹಿಡಿಯಬೇಕು ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ತಲೆನೋವು ಶುರುವಾಗಿದ್ದು ಮುಂದಿನ ದಿನಗಳಲ್ಲಿ ಈ ಕುರಿತು ಕೇಂದ್ರದ ಮೊರೆ ಹೋಗಿ,ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸುವ ಕುರಿತು ಚಿಂತನೆ ನಡೆದಿದೆ.