12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಪ್ಲೇ ಆಫ್ಗೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಲ್ಸ್, ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಎಂಟ್ರಿಕೊಟ್ಟಿವೆ. ಸೆಮಿಫೈನಲ್ ಎಂದೇ ಕರೆಯಲಾಗುವ ಐಪಿಎಲ್ನ ಪ್ಲೇ ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸುತ್ತಿವೆ. ಈ ಹೈವೋಲ್ಟೇಜ್ ಮ್ಯಾಚ್ಗೆ ಚೆನ್ನೈನ ಚೆಪಾಕ್ ಅಂಗಳ ವೇದಿಕೆ ಆಗಿದೆ..
ಟೂರ್ನಿಯುದ್ದಕ್ಕೂ ಎರಡೂ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿವೆ. ಯಾವುದೇ ಎದುರಾಳಿಗೂ ಮಣ್ಣುಮುಕ್ಕಿಸಬಲ್ಲ ಚಾಣಾಕ್ಷ ಆಟಗಾರರು ಉಭಯ ತಂಡಗಳಲ್ಲಿದ್ದಾರೆ. ಇನ್ನೂ ಇಲ್ಲಿ ಗೆದ್ದ ತಂಡ ನೇರ ಫೈನಲ್ಗೆ ಎಂಟ್ರಿ ಪಡೆಯಲಿದೆ. ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ದ ಕ್ವಾಲಿಫೈಯರ್ನಲ್ಲಿ ಮೊದಲ ಪಂದ್ಯದಲ್ಲಿ ಸೋತ ತಂಡ ಮತ್ತೆ ಸೆಣೆಸಾಡಲಿವೆ. ಇಲ್ಲಿ ಗೆದ್ದ ತಂಡ 2ನೇ ತಂಡವಾಗಿ ಫೈನಲ್ ಪ್ರವೇಶಿಸಲಿದೆ.
ಲೀಗ್ನಲ್ಲಿ ಚೆನ್ನೈವಿರುದ್ಧ ಕಿಂಗ್ ಆಗಿ ಮೆರೆದಿದ್ದ ಮುಂಬೈ..!
12ನೇ ಆವೃತ್ತಿಯ ಲೀಗ್ ಹಂತದಲ್ಲಿ 2 ಬಾರಿ ಚೆನ್ನೈ ಸೂಪರ್ ಕಿಂಗ್ಸ್ಗೆ ಮಣ್ಣು ಮುಕ್ಕಿಸಿರುವ ಮುಂಬೈ ಇಂಡಿಯನ್ಸ್, ಕ್ವಾಲಿಫೈಯರ್ ಪಂದ್ಯದಲ್ಲಿ ಮತ್ತೊಮ್ಮೆ ಚೆನ್ನೈ ತಂಡಕ್ಕೆ ಸೋಲುಣಿಸುವ ಉತ್ಸಾಹದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಅತ್ಯುತ್ತಮವಾಗಿದ್ದು, ಐಪಿಎಲ್ ಸರಣಿಯಲ್ಲೆ ಅತ್ಯಂತ ಗಮನ ಸೆಳೆದಿದೆ. ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಕ್ಲಿಕ್ ಆಗಿರುವುದು ತಂಡದ ಬಲ ಹೆಚ್ಚಿಸಿದೆ. ಹಾರ್ದಿಕ್ ಪಾಂಡ್ಯಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಮ್ಯಾಚ್ ವಿನ್ನಿಂಗ್ ಬೌಲರ್ಗಳ ದಂಡೇ ಇದೆ. ವೇಗಿ ಬೂಮ್ರಾ, ಲಸಿತ್ ಮಾಲಿಂಗ, ಪಾಂಡ್ಯಾ ಬ್ರದರ್ಸ್ ಇಂದಿನ ಪಂದ್ಯದಲ್ಲಿ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ.
ತವರಿನಲ್ಲಿ ಸೇಡು ತೀರಿಸಿಕೊಳ್ಳುತ್ತಾ ಸೂಪರ್ ಕಿಂಗ್ಸ್ ..?
12 ಆವೃತ್ತಿಗಳ ಪೈಕಿ10 ಬಾರಿ ಪ್ಲೇ ಆಫ್ಗೆ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆಲ್ಲುವ ಪೇವರೇಟ್ ತಂಡವಾಗಿದೆ. 14 ಪಂದ್ಯಗಳ ಪೈಕಿ 9 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಚೆನ್ನೈ, ತವರಿನ ಅಂಗಳದಲ್ಲಿ ಮುಂಬೈ ವಿರುದ್ಧ ಸೇಡು ತೀರಿಸಿಕೊಳ್ಳುಲು ಹೊಂಚುಹಾಕಿದೆ. ಚೆನ್ನೈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಧೋನಿ, ಬ್ರಾವೋ, ಹೀಗೆ ಮ್ಯಾಚ್ ವಿನ್ನರ್ಗಳ ದಂಡೇ ಇದೆ. ಆದ್ರೆ, ಶೇನ್ ವಾಟ್ಸನ್, ಅಂಬಾಟಿ ರಾಯಡು, ಕೇದಾರ್ ಜಾಧವ್ ವೈಫಲ್ಯ ತಂಡದ ಆತಂಕಕ್ಕೆ ಕಾರಣವಾಗಿದೆ.
ಪಂಜಾಬ್ ವಿರುದ್ಧ ಚೆನ್ನೈ ಬೌಲರ್ಗಳು ದುಬಾರಿಯಾಗಿರೋದು ಧೋನಿಗೆ ತಲೆನೋವಾಗಿ ಪರಿಣಮಿಸಿದೆ. ಆದ್ರೆ, ಇಂದಿನ ಪಂದ್ಯದಲ್ಲಿ ಚೆನ್ನೈ ಬೌಲರ್ಗಳು ತವರಿನ ಅಂಗಳದಲ್ಲಿ ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದಾರೆ.
ಒಟ್ನಲ್ಲಿ ಮೊಲದ ಕ್ವಾಲಿಫೈಯರ್ ಮ್ಯಾಚ್ ಮದಗಜಗಳ ಹೋರಾಟಕ್ಕೆ ಸಾಕ್ಷಿಯಾಗಲಿದ್ದು, ಗೆದ್ದ ತಂಡ ನೇರ ಫೈನಲ್ಗೆ ಎಂಟ್ರಿ ಪಡೆಯಲಿದೆ.