ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋದ್ರಲ್ಲಿ ತಪ್ಪೇನಿದೆ; ಗೃಹ ಸಚಿವ ಎಂಬಿ ಪಾಟೀಲ

ಬೆಂಗಳೂರು ಇನ್ನೊಂದು ಬಾರಿ ಮುಖ್ಯಮಂತ್ರಿ ಆಗುವ ಅರ್ಹತೆ ಸಿದ್ದರಾಮಯ್ಯ ಅವರಿಗೆ ಇದೆ. ಬಡವರ ಪರ ಉತ್ತಮ ಕೆಲಸ ಮಾಡಿದವರು ಅವರು.

ಸಿದ್ದರಾಮಯ್ಯ ಇನ್ನೊಂದು ಅವಧಿಗೆ ಮುಖ್ಯಮಂತ್ರಿ ಆಗುವುದಾದರೆ ನಾನು ಕಾಯುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಜೊತೆಗೆ ತಾವು ಸಿಎಂ ಆಕಾಂಕ್ಷಿಯಾಗಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಮತ್ತೊಮ್ಮೆ ಹೇಳಿದ್ದಾರೆ.

ಬಸವ ಜಯಂತಿ ಹಿನ್ನೆಲೆಯಲ್ಲಿ ಚಾಲುಕ್ಯ ಸರ್ಕಲ್​ ಬಳಿಯಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಜನಪ್ರಿಯ ಯೋಜನೆಗಳನ್ನು ಸಿದ್ದರಾಮಯ್ಯ ಕೊಟ್ಟರು. ಅವರಿಗೆ ಇನ್ನೊಂದು ಬಾರಿ ಸಿಎಂ ಆಗುವ ಅರ್ಹತೆ ಇತ್ತು. ಆದರೆ, ಜನರ ತೀರ್ಪಿಗೆ ನಾವು ಗೌರವಿಸಬೇಕಿದೆ ಎಂದರು.

ಮೈತ್ರಿ ಸರ್ಕಾರ ನಾಲ್ಕು ವರ್ಷ ಪೂರೈಸಲಿದೆ. ನಾವು ಈಗಾಗಲೇ ಜೆಡಿಎಸ್​ಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಅದರಂತೆ 4 ವರ್ಷಗಳ ಕಾಲ ಕುಮಾರಸ್ವಾಮಿಯೇ ಸಿಎಂ ಆಗಿರಲಿದ್ದಾರೆ. ಈ ಅವಧಿಯಲ್ಲಿ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಒಂದು ವೇಳೆ ಈ ರೀತಿ ವಿಷಯ ಬಂದರೆ ದೇವೇಗೌಡರು ಹಾಗೂ ರಾಹುಲ್ ಗಾಂಧಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಈವರೆಗೂ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಆಗಬೇಕು ಎಂದು ನನಗೂ ಆಸೆ ಇದೆ. ಆದರೆ ಅದಕ್ಕಿಂತ ಮೊದಲು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು. ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಸರ್ಕಾರ ಅವಧಿ ಮುಗಿಯಬೇಕು. ಆ ಬಳಿಕ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಆಗ ನೋಡೋಣ ಸಿದ್ದರಾಮಯ್ಯ ಸಿಎಂ ಆಗಬಹುದು.

ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಅಂದರೆ,  ನಾನು ಬೇಕಾದರೆ ಕಾಯುತ್ತೇನೆ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್​ ನಡೆಸಿದರು. ಜೊತೆಗೆ ತಾವು ಕೂಡ ಸಿಎಂ ರೇಸ್​ನಲ್ಲಿ ಇದ್ದೇವೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಶಾಸಕ ಸುಧಾಕರ್ ಕೂಡ ಗೃಹ ಸಚಿವರ  ಮಾತಿಗೆ ಧ್ವನಿ ಗೂಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ 16-18 ಸೀಟು ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಬಿಜೆಪಿ 22 ಸೀಟು ಗೆಲ್ಲುತ್ತೆ ಎನ್ನುವ ಬಿಎಸ್​ ಯಡಿಯೂರಪ್ಪ ವಿಶ್ವಾಸ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬುದು ಮೇ 23ಕ್ಕೆ ತಿಳಿಯುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ