ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರಿಗೆ ಕ್ಲೀನ್ ಚಿಟ್ ನೀಡಿ ತ್ರಿಸದಸ್ಯ ಪೀಠದ ತೀರ್ಪಿನ ಕುರಿತು ದೂರುದಾರ ಮಹಿಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಹಿಳೆ, ‘ಇಂದು ನನ್ನ ಸಂದೇಹ ನಿಜವಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯವು ನನಗೆ ನ್ಯಾಯ ನೀಡುತ್ತದೆ ಎಂಬ ನನ್ನ ನಂಬಿಕೆಯು ನುಚ್ಚುನೂರಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಆಂತರಿಕ ಸಮಿತಿಯ ವರದಿಗೆ ಪ್ರತಿಕ್ರಿಯೆ ನೀಡಿರುವ 35 ವರ್ಷ ವಯಸ್ಸಿನ ಮಹಿಳೆ, ‘ತ್ರಿಸದಸ್ಯ ಪೀಠ ತೀರ್ಪಿನಿಂದಾಗಿ ನನಗೆ ಅತ್ಯಂತ ನಿರಾಸೆ ಹಾಗೂ ಬೇಸರವಾಗಿದೆ. ಮಹಿಳೆಯಾಗಿರುವ ಕಾರಣಕ್ಕೆ ನನಗೆ ಅನ್ಯಾಯ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಎಲ್ಲ ರೀತಿಯ ಸಾಕ್ಷ್ಯಾಧಾರಗಳನ್ನೂ ನ್ಯಾಯಮೂರ್ತಿ ಬೋಬ್ಡೆ ಅವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಟಕ್ಕೆ ನೀಡಿದ್ದೆ ಎಂದು ಹೇಳಿದ್ದಾರೆ.
ನ್ಯಾಯಪೀಠದ ವಿರುದ್ಧವೂ ಕಿಡಿಕಾರಿರುವ ಮಹಿಳೆ, ಕನಿಷ್ಠ ಪಕ್ಷ ತೀರ್ಪಿನ ಪ್ರತಿಯನ್ನೂ ನ್ಯಾಯಪೀಠ ದೂರುದಾರಳಾದ ನನಗೆ ನೀಡಿಲ್ಲ. ನನ್ನ ಬಗ್ಗೆ ನ್ಯಾಯಪೀಠಕ್ಕೆ ಇರುವ ಭಾವನೆ ಇದರಿಂದಲೇ ತಿಳಿಯುತ್ತದೆ. ಆದರೂ ನಾನು ಎದೆಗುಂದುವುದಿಲ್ಲ. ನನ್ನ ವಕೀಲರನ್ನು ಭೇಟಿ ಮಾಡಿ ಬಗ್ಗೆ ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.