ನಾಗಮಂಗಲ, ಮೇ 7- ರಸ್ತೆ ದಾಟುತ್ತಿದ್ದ ಬೈಕ್ ಸವಾರನಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಒಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ತಾಲೂಕಿನ ಕದಬಹಳ್ಳಿ ಸರ್ಕಲ್ನಲ್ಲಿ ನಡೆದಿದೆ.
ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿ ಹಡೇನಹಳ್ಳಿ ಗ್ರಾಮದ ಲಕ್ಷ್ಮಣ (40) ಮೃತ ದುರ್ದೈವಿ.
ಮೃತನ ಪುತ್ರ ಶರತ್ ಕೂಡ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಕೂಟರ್ ಸವಾರ ಸ್ವಗ್ರಾಮ ಹಡೇನಹಳ್ಳಿಗೆ ತೆರಳಲು ಎನ್ಹೆಚ್-75 ರಸ್ತೆ ದಾಟಲು ಮುಂದಾದಾಗ ಚನ್ನರಾಯಪಟ್ಟಣದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ.
ಪರಿಹಾರಕ್ಕೆ ಪಟ್ಟು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಮತ್ತು ಸ್ಥಳೀಯರು ಶವ ತೆರವುಗೊಳಿಸಲು ಅವಕಾಶ ನೀಡದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲೆ ಕುಳಿತು ಸ್ಥಳದಲ್ಲೇ ಪರಿಹಾರಕ್ಕಾಗಿ ಪಟ್ಟುಹಿಡಿದು ಪ್ರತಿಭಟಿಸಿದರು.
ಇದರಿಂದ ಹೆದ್ದಾರಿಯಲ್ಲಿ ಕಿಲೋ ಮೀಟರ್ ಉದ್ದದವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
ಘಟನಾ ಸ್ಥಳಕ್ಕೆ ಆಗಮಿಸಿದ ಬಿಂಡಿಗನವಿಲೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸುಗಮ ರಸ್ತೆ ಸಂಚಾರ ವ್ಯವಸ್ಥೆಗೆ ಹರಸಾಹಸ ಪಡಬೇಕಾಯಿತು. ಬಿಂಡಿಗನವಿಲೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.
ಅಂಡರ್ಪಾಸ್ ರಸ್ತೆಗೆ ಒತ್ತಾಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕದಬಹಳ್ಳಿ ಸರ್ಕಲ್ ಬಳಿ ಹೆಚ್ಚು ಅಪಘಾತವಾಗುತ್ತಿವೆ. ವಾಹನ ಸಂಚಾರವೂ ದಟ್ಟವಾಗಿದೆ. ಸಾರ್ವಜನಿಕರು, ಶಾಲಾ ಮಕ್ಕಳು ರಸ್ತೆ ದಾಟಲು ಪರದಾಡಬೇಕಾದ ಪರಿಸ್ಥಿತಿ ಇದೆ. ಕೂಡಲೆ ಸರ್ಕಾರ ಅಂಡರ್ ಪಾಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.