ತುಮಕೂರು,ಮೇ7-ಕಾಫಿಗೆಂದು ಬಸ್ ನಿಲ್ಲಿಸಿದ್ದ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರ 27 ಲಕ್ಷ ಹಣವನ್ನು ಖದೀಮರು ದೋಚಿಕೊಂಡು ಪರಾರಿಯಾಗಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್ ಕ್ಯಾತಸಂದ್ರ ಸಮೀಪದ ಜಾಸ್ ಟೋಲ್ ಬಳಿ ಕಾಫಿ ಕುಡಿಯಲು ಬಸ್ ನಿಲ್ಲಿಸಿ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರೆಲ್ಲರೂ ಕಾಫಿ ಕುಡಿಯಲು ಹೋಟೆಲ್ಗೆ ಹೋಗಿದ್ದಾರೆ.
ಸಂಬಂಧಿಕರಿಗೆ ಹಣ ಕೊಡಲು ರಾಯಚೂರಿನಿಂದ ಆಗಮಿಸಿದ್ದ ಮೊಹಮ್ಮದ್ ಅನ್ವರ್ ಎಂಬುವರು ಹಣದ ಚೀಲವನ್ನು ಬಸ್ನಲ್ಲೇ ಇಟ್ಟು ಅವರು ಸಹ ಕಾಫಿ ಕುಡಿಯಲು ಹೋದಾಗ ಈ ಸಂದರ್ಭಕ್ಕಾಗಿ ಹೊಂಚು ಹಾಕಿದ್ದ ಖದೀಮರು ಹಣದ ಚೀಲವನ್ನು ದೋಚಿ ಪರಾರಿಯಾಗಿದ್ದಾರೆ.
ಪುನಃ ಬಸ್ಸಿಗೆ ಬಂದಾಗ ಹಣದ ಚೀಲ ನಾಪತ್ತೆಯಾಗಿದ್ದನ್ನು ಕಂಡು ಅನ್ವರ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಎ ಎಸ್ಪಿ ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ಜಗದೀಶ್, ಇನ್ಸ್ಪೆಕ್ಟರ್ ರಾಘವ್ ಎಸ್.ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಸಿಟಿವಿ ಪುಟೇಜ್ನಲ್ಲಿ ಸುಳಿವು ಲಭ್ಯ:
ರಾಯಚೂರಿನಿಂದ ಪ್ರಯಾಣ ಮಾಡುತ್ತಿದ್ದ ಮಹಮ್ಮದ್ ಅನ್ವರ್ನನ್ನು ಖದೀಮರು ಹಿಂಬಾಲಿಸಿ ಆವರ ಬಳಿ ಹಣ ಇರುವುದರ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ರಾತ್ರಿ ಇಡೀ ಹಲವು ಕಡೆ ಸಿಸಿಟಿವಿ ಪುಟೇಜ್ನ್ನು ಪರಿಶೀಲನೆ ನಡೆಸಿದಾಗ ಮಾಹಿತಿಗಳು ಲಭ್ಯವಾಗಿದೆ ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರಾಜು, ಸಿಬ್ಬಂದಿಗಳಾದ ಮೋಹನ್ಕುಮಾರ್, ಸಯ್ಯದ್, ರುದ್ರೇಶ್ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.