ಬೆಂಗಳೂರು, ಮೇ 6- ಪ್ರಸಕ್ತ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುವವರೆಗೂ ತಟಸ್ಥವಾಗಿರಲು ಪಕ್ಷದ ಮುಖಂಡರಿಗೆ ಜೆಡಿಎಸ್ ವರಿಷ್ಠರು ಸೂಚನೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ವಿದ್ಯಮಾನ ನಡೆದರೂ ತಟಸ್ಥವಾಗಿದ್ದು ಗಮನಿಸಬೇಕು. ಅದಕ್ಕೆ ಪ್ರತಿಕ್ರಿಯಿಸುವುದು ಬೇಡ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಹಲವು ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುತ್ತಿರುತ್ತವೆ. ಎಲ್ಲವನ್ನೂ ಮೌನವಾಗಿದ್ದೇ ಗಮನಿಸಬೇಕು. ಚುನಾವಣಾ ಫಲಿತಾಂಶದ ನಂತರ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬುದನ್ನು ಈಗಲೇ ಊಹಿಸುವುದು ಬೇಡ. ಸದ್ಯಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, ಅದರ ಕಡೆ ಹೆಚ್ಚು ಗಮನ ಹರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ.
ಮತ್ತೆ ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುವ ಸಾಧ್ಯತೆ ಇದ್ದು, ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿರಬೇಕು. ಹಾಗೆಯೇ ಲೋಕಸಭೆ ಚುನಾವಣಾ ಫಲಿತಾಂಶ ಕುರಿತ ವಿಷಯಗಳು ಗೌಪ್ಯವಾಗಿರಬೇಕು ಎಂಬ ಸಲಹೆಯನ್ನು ಗೌಡರು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಲೋಕಸಭೆಗೆ ಮತದಾನ ನಡೆದ ಬಳಿಕ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಅಪಸ್ವರ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳಲ್ಲೂ ಕೇಳಿ ಬರುತ್ತಿದೆ.
ಇದರ ನಡುವೆಯೇ ಬಿಜೆಪಿ ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಅಧಿಕಾರ ಹಿಡಿಯಲಿದೆ ಎಂಬ ಧೋರಣೆಯಿಂದ ಮಾತನಾಡುತ್ತಿರುವುದರಿಂದ ಸದ್ಯಕ್ಕೆ ಮೌನವಹಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಗಮನಹರಿಸುವಂತೆ ದೇವೇಗೌಡರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.