ಬೆಂಗಳೂರು, ಮೇ 6-ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸಂಸದ ಬಿ.ವಿ.ನಾಯಕ್ ಮತ್ತು ಅವರ ಆಪ್ತ ಎನ್.ಪಿ.ಬಿರಾದಾರ್ ನಡೆಸಿದ ಸಂಧಾನ ಸಕಾರಾತ್ಮಕ ಫಲ ನೀಡುವ ಹಾದಿಯಲ್ಲಿದೆ.
ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ರಮೇಶ್ ಜಾರಕಿಹೊಳಿ ಅವರನ್ನು ಇಂದು ಬೆಳಗ್ಗೆ ರಾಯಚೂರಿನ ಸಂಸದ ಬಿ.ವಿ.ನಾಯಕ್ ಮತ್ತು ಅವರ ಆಪ್ತ ಎನ್.ಪಿ.ಬಿರಾದಾರ್ ಅವರು ಸಚಿವರ ಸರ್ಕಾರಿ ಬಂಗಲೆಯಲ್ಲಿ ಭೇಟಿ ಮಾಡಿ ಸಂಧಾನ ಮಾತುಕತೆ ನಡೆಸಿದರು.
ಅನಂತರ ಬಿ.ವಿ.ನಾಯಕ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಮೇಶ್ ಜಾರಕಿಹೊಳಿಯ ಷರತ್ತುಗಳನ್ನು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸಂಧಾನ ಮಾತುಕತೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿಮಾಡಲು ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಮಾತುಕತೆ ವೇಳೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡಲು ಸಿದ್ಧರಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ನಾನು ಶಾಸಕನಾಗಿದ್ದೇನೆ. ಕ್ಷೇತ್ರದ ಮೇಲೆ ನನಗೆ ಹಿಡಿತ ಇದೆ. ಈಗ ಹೊಸದಾಗಿ ಪಕ್ಷ ಬದಲಾವಣೆ ಮಾಡುವುದರಿಂದ ರಾಜಕೀಯವಾಗಿಯೂ ಇಕ್ಕಟ್ಟಿಗೆ ಸಿಲುಕಬಹುದು ಎಂಬ ವಾಸ್ತವವೂ ಗೊತ್ತಿದೆ. ನನಗೆ ಕಾಂಗ್ರೆಸ್ ತೊರೆಯುವುದು ಬೇಕಿಲ್ಲ. ಆದರೆ ಸಚಿವ ಸ್ಥಾನ ಸಿಗಬೇಕು, ಬೆಳಗಾವಿ ಜಿಲ್ಲೆ ಉಸ್ತುವಾರಿ ಬೇಕು. ಸಚಿವ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ನಿಲ್ಲಿಸಬೇಕು ಎಂದು ಷರತ್ತು ವಿಧಿಸಿರುವುದಾಗಿ ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಹಳಷ್ಟು ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಲೂ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ಸುಭದ್ರ ಎಂಬ ಭ್ರಮೆಯಲ್ಲಿದ್ದರೆ ಮುಂದಾಗುವ ನಷ್ಟಕ್ಕೆ ಅವರೇ ಹೊಣೆಯಾಗಬೇಕಾಗುತ್ತದೆ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಂಡು ಸಮ್ಮಿಶ್ರ ಸರ್ಕಾರದ ಸ್ವರೂಪ ಬದಲಾಯಿಸುವತ್ತ ಚಿಂತನೆ ನಡೆಸಲಿ ಎಂದು ಸಂಧಾನಕಾರರಿಗೆ ರಮೇಶ್ ಜಾರಕಿ ಹೊಳಿ ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ ಮೇಲೆ ಮುನಿಸಿಕೊಂಡು ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿರುವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.
ಆದರೆ ತಾವೊಬ್ಬರೇ ರಾಜೀನಾಮೆ ನೀಡಿದರೆ ಸರ್ಕಾರಕ್ಕೆ ಅಪಾಯವಾಗುವುದಿಲ್ಲ, ಬದಲಾಗಿ ಐದಾರು ಮಂದಿ ಶಾಸಕರ ಜೊತೆಯಲ್ಲಿ ರಾಜೀನಾಮೆ ನೀಡಬೇಕೆಂದು ರಮೇಶ್ ಜಾರಕಿ ಹೊಳಿ ಪ್ರಯತ್ನ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಅವರು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಹಾಗಾಗಿ ಗೋಕಾಕ್ಗೆ ಮರಳಿದ ರಮೇಶ್ ಜಾರಕಿಹೊಳಿ, ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಇಲ್ಲೇ ಕುಳಿತು ಅತೃಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಆರಂಭದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ನಿರ್ಲಕ್ಷಿಸಿತ್ತು. ಆದರೆ ಒಬ್ಬರಿಗೊಬ್ಬರು ಜೊತೆಯಾಗಿ ಅತೃಪ್ತ ಶಾಸಕರ ಗುಂಪು ಬಲಿಷ್ಠಗೊಂಡರೆ ಪರಿಸ್ಥಿತಿ ಕೈಮೀರಬಹುದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಸಂಧಾನಕ್ಕೆ ಪ್ರಯತ್ನಿಸಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರ ಒತ್ತಾಸೆ ಮೇರೆಗೆ ಇಂದು ಸಂಧಾನದ ಮಾತುಕತೆ ನಡೆದಿದೆ.
ಕುಮಾರಸ್ವಾಮಿಯವರು ರಮೇಶ್ ಜಾರಕಿಹೊಳಿ ಅವರಿಗೆ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಕಿವಿಮಾತು ಹೇಳಿದ್ದು, ಯಾವುದೇ ಸಂದರ್ಭದಲ್ಲಿ ನಿಮ್ಮ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.