ಲೋಕಸಭಾ ಚುನಾವಣೆ 2019; 5ನೇ ಹಂತದ ಮತದಾನ, 9.30ರ ಹೊತ್ತಿಗೆ ಶೇ.12.11 ಮತದಾನ

ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 5ನೇ ಹಂತದ ಮತದಾನ ಪ್ರಕ್ರಿಯೆ ಚಾಲನೆಯಲ್ಲಿದ್ದು, ಬೆಳಗ್ಗೆ 9.30ರ ಹೊತ್ತಿಗೆ ಶೇ.12.11 ಮತದಾನವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ಬಿಹಾರದಲ್ಲಿ ಶೇ. 11.51 ರಷ್ಟು, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 0.80ರಷ್ಟು, ಜಾರ್ಖಂಡ್ ನಲ್ಲಿ ಶೇ. 13.46ರಷ್ಟು, ಮಧ್ಯ ಪ್ರದೇಶದಲ್ಲಿ ಶೇ. 12.16ರಷ್ಟು, ರಾಜಸ್ಥಾನದಲ್ಲಿ 13.37ರಷ್ಟು, ಉತ್ತರ ಪ್ರದೇಶದಲ್ಲಿ ಶೇ. 9.82ರಷ್ಟು ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ.15.19ರಷ್ಟು ಮತದಾನವಾಗಿದೆ.
7 ರಾಜ್ಯಗಳ 51 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನದಲ್ಲಿ ಸುಮಾರು 8.76 ಕೋಟಿ ಜನ ತಮ್ಮ ಮತದಾನ ಹಕ್ಕು ಚಲಾವಣೆ ಮಾಡಲಿದ್ದು, 674 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.  ಉತ್ತರಪ್ರದೇಶದ 14 ಕ್ಷೇತ್ರ, ರಾಜಸ್ಥಾನದ 12, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ತಲಾ 7 ಕ್ಷೇತ್ರ, ಬಿಹಾರದಲ್ಲಿನ 5, ಜಾರ್ಖಂಡ್​​ ನ 4, ಜಮ್ಮು ಮತ್ತು ಕಾಶ್ಮೀರದ 2  (ಅನಂತ್ ನಾಗ್ ಹಾಗೂ ಲಡಾಖ್) ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.
ಇಂದಿನ ಮತದಾನ ಪ್ರಕ್ರಿಯೆಯಲ್ಲಿ ಘಟಾನುಘಟಿ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದು, ಕಾಂಗ್ರೆಸ್ ಪಾಲಿನ ಪ್ರತಿಷ್ಠೆ ಕಣವೆಂದೇ ಹೇಳಲಾಗುತ್ತಿರುವ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​​ ಗಾಂಧಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅಲ್ಲದೇ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಸ್ಪರ್ಧಿಸಿದ್ದು, ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾ ವಿರುದ್ಧ ಸ್ಪರ್ಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ