ಬೆಂಗಳೂರು, ಮೇ 6- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಬದಲಾಗಿ ಜಿಲ್ಲಾ ಮಟ್ಟದ ಅಧ್ಯಕ್ಷರು ಜೆಡಿಎಸ್‍ನ ಅಭ್ಯರ್ಥಿಗಳಿಗೆ ನೀಡುವ ಬಿ ಫಾರಂಗಳಿಗೆ ಸಹಿ ಮಾಡಲು ರಾಜ್ಯ ಚುನಾವಣಾ ಆಯೋಗ ಅನುಮತಿ ನೀಡಿದೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಶ್ರೀನಿವಾಸಚಾರಿ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಅವರು ಈ ವಿಷಯ ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಾವಿರಾರು ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಅಷ್ಟೂ ಮಂದಿಗೆ ನೀಡುವ ಬಿ ಮತ್ತು ಎ ಫಾರಂಗಳಿಗೆ ರಾಷ್ಟ್ರೀಯ ಅಧ್ಯಕ್ಷರೊಬ್ಬರೇ ಸಹಿ ಮಾಡುವುದು ಕಷ್ಟವಾಗುತ್ತದೆ. ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಬದಲಾಗಿ ಪಕ್ಷದ ಇತರೆ ಪದಾಧಿಕಾರಿಗಳೂ ಸಹಿ ಮಾಡುವ ಅವಕಾಶ ನೀಡಬೇಕೆಂದು ಆಯೋಗದ ಆಯುಕ್ತರಿಗೆ ಮನವಿ ಮಾಡಲಾಗಿತ್ತು.
ಇದಕ್ಕೆ ಸ್ಪಂದಿಸಿದ ಆಯುಕ್ತರು ರಾಷ್ಟ್ರೀಯ ಅಧ್ಯಕ್ಷರ ಬದಲಾಗಿ ಕಂದಾಯ ವಿಭಾಗವಾರು ಪದಾಧಿಕಾರಿಗಳು ಜಿಲ್ಲಾವಾರು ಅಧ್ಯಕ್ಷರು ಬಿ ಫಾರಂಗಳಿಗೆ ಸಹಿ ಮಾಡಬಹುದು ಎಂದು ಹೇಳಿದರೆಂದು ದತ್ತ ಸ್ಪಷ್ಟಪಡಿಸಿದರು.