ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗದ ಮೆಟ್ಟಿಲೇರಿದ ಕಾಂಗ್ರೆಸ್

ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕರು ಈಗ ಮೋದಿಯವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣೆ ಆಯೋಗದ ಮೆಟ್ಟಿಲೇರಿದ್ದಾರೆ.

ರಾಜೀವ್‌ ಗಾಂಧಿ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಮಾತ್ರವಲ್ಲದೆ ಭಾರತ ರತ್ನ ಪ್ರಶಸ್ತಿಯ ಹುತಾತ್ಮನಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಚುನಾವಣೆ ಆಯೋಗ ಕ್ರಮ ಕೈಗೊಂಡು ಸಾರ್ವಜನಿಕ ರ‍್ಯಾಲಿಗಳಲ್ಲಿ ಈ ರೀತಿ ಮಾತನಾಡದಂತೆ ತಡೆಯಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ ಘಟಕ ಚುನಾವಣೆ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಇತ್ತೀಚಿಗಷ್ಟೇ ಚುನಾವಣೆ ಆಯೋಗವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕೇಳಿಬಂದಿದ್ದ ನೀತಿ ಸಂಹಿತೆ ಉಲ್ಲಂಘನೆಯ ಆರು ಪ್ರಕರಣಗಳಲ್ಲಿ ಕ್ಲೀನ್‌ ಚಿಟ್‌ ನೀಡಿತ್ತು.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ರಫೇಲ್‌ ಯುದ್ಧವಿಮಾನ ಖರೀದಿಗೆ ಸಂಬಂಧಿಸಿದಂತೆ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಷ್ಟೇ ರಾಹುಲ್ ಗಾಂಧಿ ಅವರ ಏಕೈಕ ಗುರಿಯಾಗಿದೆ. ನಿಮ್ಮ ತಂದೆ ರಾಜೀವ್‌ ಗಾಂಧಿ ತಮ್ಮ ಆಪ್ತರ ನಡುವೆ ಮಾತ್ರ ಶುದ್ಧ ಹಸ್ತ ಎನಿಸಿಕೊಂಡಿದ್ದರು. ಆದರೆ, ಅವರ ಜೀವನ ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ತಿಯೊಂದಿಗೇ ಸಮಾಪ್ತವಾಗಿತ್ತು ಎಂದು ಆರೋಪಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ