ನವದೆಹಲಿ: ಲೋಕಸಭಾ ಚುನಾವಣೆಯ 5 ನೇ ಹಂತದ ಮತದಾನ ಬರದಿಂದ ಸಾಗಿದ್ದು, ಉತ್ತರ ಪ್ರದೇಶ ಪ್ರಮುಖ ಕ್ಷೇತ್ರಗಳು ಸೇರಿದಂತೆ 7 ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯವರೆಗೆ ಶೇ.21 ಮತದಾನ ದಾಖಲಾಗಿದೆ. ಬಿಹಾರದಲ್ಲಿ ಶೇ.19.13, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.3.92, ಮಧ್ಯಪ್ರದೇಶದಲ್ಲಿ ಶೇ.16.13, ರಾಜಸ್ಥಾನದಲ್ಲಿ ಶೇ.22.67, ಉತ್ತರ ಪ್ರದೇಶದಲ್ಲಿ ಶೇ.20.26, ಪಶ್ಚಿಮ ಬಂಗಾಳದಲ್ಲಿ ಶೇ.26.01 ಮತ್ತು ಜಾರ್ಖಂಡ್ನಲ್ಲಿ ಶೇ.26.97 ಮತದಾನವಾಗಿದೆ.
ರಾಜ್ಯಸಭಾ ಸದಸ್ಯ ಕಿರೋಡಿ ಲಾಲ್ ಮೀನಾ ದೌಸಾ ಜಿಲ್ಲೆಯ ಮಹಾರಾಜಪುರ ಗ್ರಾಮದ 108 ವರ್ಷದ ರಮಾ ದೇವಿ ಹಾಗೂ 80 ವರ್ಷದ ತುಂಡಾರಾಮ್ ಮೀನಾ ಅವರನ್ನು ಮೆರವಣಿಗೆಯಲ್ಲಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿದರು. ಇಡೀ ಗ್ರಾಮದ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು, ತಮ್ಮ ಹಕ್ಕು ಚಲಾಯಿಸಿದರು.
ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತದಾನ ಮಾಡಿ ಸಂಭ್ರಮಿಸಿದರು. ಕೇಂದ್ರ ಸಚಿವ ಹಾಗೂ ಹಜಾರಿಬಾಗ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಂತ್ ಸಿನ್ಹಾ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಜಮ್ಮು ಮತ್ತು ಕಾಶ್ಮೀರದ ಲೇಹ್ ಜಿಲ್ಲೆಯಲ್ಲಿ ನಡೆದಿರುವ ಮತದಾನದಲ್ಲಿ ಮತದಾರರು ಮತಗಟ್ತೆಗಳಿಗೆ ಸಂಭ್ರಮದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.
ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಮತಹಬ್ಬದ ಸಂಭ್ರಮ ಮನೆ ಮಾಡಿದ್ದು, ಮತದಾರರು ತುಂಬು ಉತ್ಸಾಹದಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಲಖನೌನ ಸಿಟಿ ಮಾಂಟೆಸರಿ ಇಂಟರ್ ಕಾಲೇಜಿನಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ ಚಲಾಯಿಸಿದರು
ಬಿಹಾರದ ಛಾಪ್ರಾದ ಮತಗಟ್ಟೆ ಸಂಖ್ಯೆ 131ರಲ್ಲಿ ಇವಿಎಂ ಅನ್ನು ನೆಲಕ್ಕಪ್ಪಳಿಸಿ, ಒಡೆದು ಹಾಕಿದ ರಣಜಿತ್ ಪಾಸ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ನ ಹಜಾರಿಬಾಗ್ನ ಮತಗಟ್ಟೆ ಸಂಖ್ಯೆ 450ರಲ್ಲಿ ವ್ಯಕ್ತಿಯೊಬ್ಬರು ತಮ್ಮ 105 ವರ್ಷದ ತಮ್ಮ ತಾಯಿಯೊಂದಿಗೆ ಮತಗಟ್ಟೆಗೆ ಬಂದು ಮತಚಲಾಯಿಸಿದರು.
ರಾಜಸ್ಥಾನದ ಹನುಮಾನ್ಗಢದ ನೋಹರ್ನ ಮತಗಟ್ಟೆಯೊಂದರಲ್ಲಿ 109 ವರ್ಷದ ಹಿರಿಯ ಮಹಿಳೆ ಚಾವ್ಲಿ ದೇವಿ ತಮ್ಮ ಹಕ್ಕು ಚಲಾಯಿಸಿದರು.
ಉತ್ತರಪ್ರದೇಶ(14), ರಾಜಸ್ಥಾನ(12), ಪಶ್ಚಿಮ ಬಂಗಾಳ(7), ಮಧ್ಯಪ್ರದೇಶ(7), ಬಿಹಾರ(5), ಜಾರ್ಖಂಡ್(4) ಹಾಗೂ ಜಮ್ಮು-ಕಾಶ್ಮೀರದಲ್ಲಿ ಲಡಾಖ್, ಅನಂತ್ನಾಗ್ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.