ಸರ್ಕಾರದ ಉಳಿವಿನ ಬಗ್ಗೆ ಮಿತ್ರ ಪಕ್ಷಗಳ ನಾಯಕರಲ್ಲಿ ಗೊಂದಲ

ಬೆಂಗಳೂರು, ಮೇ 5-ಸಮ್ಮಿಶ್ರ ಸರ್ಕಾರ ಉಳಿಯಲಿದೆಯೋ, ಅಳಿಯಲಿದೆಯೋ ಎಂಬ ಜಿಜ್ಞಾಸೆ ಜನಸಾಮಾನ್ಯರನ್ನು ಕಾಡುತ್ತಿರುವಂತೆಯೇ ಮಿತ್ರ ಪಕ್ಷಗಳ ನಾಯಕರಲ್ಲೂ ಗೊಂದಲ ಹುಟ್ಟು ಹಾಕಿದೆ.

ಸಮ್ಮಿಶ್ರ ಸರ್ಕಾರ ಉಳಿಯಲೇಬೇಕು ಎಂಬುದು ಎರಡೂ ಪಕ್ಷಗಳ ಪ್ರಮುಖ ನಾಯಕರ ಒತ್ತಾಸೆ ಒಂದು ಕಡೆಯಾದರೆ, ಹೇಗೆ ಉಳಿಸಿಕೊಳ್ಳಬೇಕು ಎಂಬ ಚರ್ಚೆಗಳು ಮತ್ತೊಂದು ಕಡೆ ನಡೆಯುತ್ತಿವೆ.

ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿಯ ಸಭೆ ನಡೆಯಲಿದೆ. ಸಮ್ಮಿಶ್ರ ಸರ್ಕಾರವನ್ನು ಈವರೆಗೂ ಕಾಡುತ್ತಿರುವ ಗೊಂದಲಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಬಗೆಹರಿಸಿಕೊಳ್ಳುವ ಸಾಧ್ಯತೆಗಳಿವೆ.

ಬಿಜೆಪಿ ಈವರೆಗೂ ನಾಲ್ಕು ಬಾರಿ ಗಂಭೀರ ಸ್ವರೂಪದ ಆಪರೇಷನ್ ಕಮಲಕ್ಕೆ ಪ್ರಯತ್ನ ಮಾಡಿ ವಿಫಲವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಪ್ರಯತ್ನವನ್ನೂ ನಡೆಸಿ ಯಶಸ್ವಿಯಾಗದೆ ಕೈ ಚೆಲ್ಲಿದೆ.

ಈ ಹಿಂದೆ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಆಪ್ತರೊಂದಿಗೆ ಮಾತುಕತೆ ನಡೆಸುವಾಗ, ಲೋಕಸಭೆ ಚುನಾವಣೆ ನಂತರ ಸರ್ಕಾರ ಉಳಿಯುವುದಿಲ್ಲ ಎಂದು ಹೇಳಿದ ಮಾತಿನ ಮೇಲೆ ಬಿಜೆಪಿಗೆ ಭಾರೀ ಭರವಸೆ ಇದೆ.

ರಾಜಕೀಯದಲ್ಲಿ ಭಾರೀ ಪವಾಡ ನಡೆಯಲಿದೆ. ದೋಸ್ತಿ ಪಕ್ಷಗಳ ನಾಯಕರುಗಳೇ ಸರ್ಕಾರವನ್ನು ಕೆಡವುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಕಾದು ಕುಳಿತಿದೆ. ಜೊತೆ ಜೊತೆಯಲ್ಲಿ ತನ್ನ ಕಡೆಯಿಂದಲೂ ಅತೃಪ್ತರನ್ನು ಸೆಳೆಯುವ ಆಪರೇಷನ್ ಕಮಲದ ಪ್ರಯತ್ನವನ್ನು ನಡೆಸುತ್ತಿದೆ.

ಇತ್ತೀಚಿನ ಲೋಕಸಭೆ ಚುನಾವಣೆ ಜಂಟಿ ಪ್ರಚಾರದ ನಂತರ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ಉತ್ತಮ ರೀತಿಯ ಬಾಂಧವ್ಯ ಏರ್ಪಟ್ಟಂತಿದೆ. ಕಾಂಗ್ರೆಸ್ ಹೈಕಮಾಂಡ್ ತಗಾಧೆ ತೆಗೆಯದೇ ಇದ್ದರೆ, ಸಮ್ಮಿಶ್ರ ಸರ್ಕಾರವನ್ನು ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಲು ಸ್ಥಳೀಯ ನಾಯಕರಲ್ಲಿ ಅಂತಹ ಆಕ್ಷೇಪಗಳು ಕೇಳಿಬರುತ್ತಿಲ್ಲ.

ಸಣ್ಣಪುಟ್ಟ ಪ್ರಮಾಣದ ಅಪಸ್ವರಗಳು, ಅಸಮಾಧಾನಗಳು ಪದೇ ಪದೇ ಚರ್ಚೆಯಾಗುತ್ತಿವೆ. ಇವುಗಳನ್ನು ಕುಳಿತು ಚರ್ಚಿಸುವ ಮೂಲಕ ಬಗೆಹರಿಸಿಕೊಳ್ಳುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ಸಮನ್ವಯ ಸಮಿತಿ ಸಭೆ ನಡೆಯಬೇಕೆಂದು ಎರಡೂ ಪಕ್ಷಗಳ ಸಚಿವರುಗಳು ನಾಯಕರ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ.

ಅಸಮಾಧಾನಗಳ ಮೂಲಗಳು:
ಜೆಡಿಎಸ್ ನಾಯಕರು ಕಾಂಗ್ರೆಸ್ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.ನಿಗಮ ಮಂಡಳಿಗಳ ಅಧ್ಯಕ್ಷರುಗಳ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸಿದ್ದಾರೆ. ಈ ಹಸ್ತಕ್ಷೇಪ ನಿಲ್ಲಬೇಕು ಎಂಬುದು ಕಾಂಗ್ರೆಸ್ ಶಾಸಕರ ಪ್ರಮುಖ ಬೇಡಿಕೆಯಾಗಿದೆ.

ಈ ಮೊದಲು ವರ್ಗಾವಣೆಯಲ್ಲಿ ಜೆಡಿಎಸ್ ತನ್ನ ಪಾರುಪತ್ಯ ಮೆರೆದಿದ್ದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೂ ಒಲ್ಲದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಈ ವರ್ಷದ ವರ್ಗಾವಣೆ ಸಂದರ್ಭದಲ್ಲಿ ಶಾಸಕರುಗಳ ಅಭಿಪ್ರಾಯಗಳಿಗೆ ಆದ್ಯತೆ ನೀಡಬೇಕು. ಹೊರಗಿನ ವ್ಯಕ್ತಿಗಳು ಅಥವಾ ಕ್ಷೇತ್ರದಲ್ಲೇ ಇತರ ಪ್ರಭಾವಿಗಳಿಗೆ ಮಣೆ ಹಾಕಬಾರದು.

ಅನುದಾನ ಹಂಚಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಎಂಬ ತಾರತಮ್ಯ ಮಾಡಬಾರದು.ಬಾಕಿ ಇರುವ ನಿಗಮ ಮಂಡಳಿ ನೇಮಕಾತಿಗೆ ಕಾಂಗ್ರೆಸ್ ಸೂಚಿಸಿದ ಹೆಸರುಗಳನ್ನು ತಕರಾರಿಲ್ಲದೆ ಅಂಗೀಕರಿಸಬೇಕು.ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದ ಯೋಜನೆಗಳು ತೀವ್ರಗತಿಯಲ್ಲಿ ಅನುಷ್ಟಾನಗೊಳ್ಳುತ್ತಿಲ್ಲ, ಅವುಗಳಿಗೆ ಒತ್ತು ನೀಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾದರೂ ಅದನ್ನು ಸಂಪುಟದಲ್ಲಿ ಚರ್ಚಿಸಿ, ನಂತರವೇ ಪ್ರಕಟಿಸಬೇಕು. ಸಾಲಮನ್ನಾ ಹಾಗೂ ಇತರ ವಿಷಯಗಳಲ್ಲಿ ಜೆಡಿಎಸ್ ನಾಯಕರು ಏಕಮುಖ ನಿರ್ಧಾರ ತೆಗೆದುಕೊಂಡಿದ್ದರಿಂದ ಕಾಂಗ್ರೆಸ್‍ಗೆ ಮುಜುಗರ ಉಂಟಾಗಿದೆ. ಇನ್ನು ಮುಂದೆ ಆ ರೀತಿ ಪರಿಸ್ಥಿತಿ ಉಂಟಾಗದೆ ಎಚ್ಚರಿಕೆ ವಹಿಸಬೇಕು ಎಂಬುದು ಕಾಂಗ್ರೆಸ್‍ನ ಬೇಡಿಕೆಯಾಗಿದೆ.

ಸಣ್ಣಪುಟ್ಟ ಪ್ರಮಾಣದ ಈ ಅಸಮಾಧಾನಗಳನ್ನು ಬಗೆಹರಿಸಿಕೊಂಡರೆ ಶಾಸಕ ಅಸಮಾಧಾನ ಕಡಿಮೆಯಾಗುತ್ತದೆ.ಸರ್ಕಾರ ಸುಲಲಿತವಾಗಿ ನಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಬಿಜೆಪಿ ಅವಕಾಶ ಪಡೆದುಕೊಳ್ಳುತ್ತದೆ. ಎರಡೂ ಪಕ್ಷಗಳು ವಿರೋಧ ಪಕ್ಷದ ಸಾಲಿನಲ್ಲಿ ಕೂರಬೇಕಾಗುತ್ತದೆ, ರಾಜಕೀಯ ಅಸ್ಥಿರತೆಯಿಂದ ರಾಜ್ಯಪಾಲರ ಆಡಳಿತ ಬರುವುದು ಅಥವಾ ಮತ್ತೊಂದು ಚುನಾವಣೆ ಎದುರಿಸುವ ಅನಿವಾರ್ಯತೆ ಎದುರಾಗುತ್ತದೆ.ಅದಕ್ಕೆ ಅವಕಾಶವಾಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಕಾಂಗ್ರೆಸ್‍ನ ಪ್ರಮುಖ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಏನೇ ಇರಲಿ ಸಮ್ಮಿಶ್ರ ಸರ್ಕಾರವನ್ನು ಕಾಪಾಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅದಕ್ಕಾಗಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಕೂಡ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ