ಬೆಂಗಳೂರು, ಮೇ 4- ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ ಎಣಿಕೆಯ ವೀಡಿಯೋ ಚಿತ್ರೀಕರಣದ ತುಣಕನ್ನು ಅಪೇಕ್ಷೆ ಪಟ್ಟರೆ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಇಂದಿಲ್ಲಿ ತಿಳಿಸಿದರು.
ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಮತ ಪೆಟ್ಟಿಗೆಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮತ ಎಣಿಕೆಯ ದೃಶ್ಯವನ್ನು ಚಿತ್ರೀಕರಿಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.ಆಯೋಗದ ಆದೇಶದಂತೆ ಮತ ಎಣಿಕೆಯ ಸಂಪೂರ್ಣ ಚಿತ್ರೀಕರಣ ಮಾಡಲಾಗುವುದು.ಚಿತ್ರೀಕರಣದ ತುಣಕನ್ನು ಅಭ್ಯರ್ಥಿಗಳು ಅಪೇಕ್ಷೆ ಪಟ್ಟರೆ ವಿತರಿಸಲಾಗುವುದು ಎಂದರು.
ಬೆಂಗಳೂರು ಕೇಂದ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಮತ ಎಣಿಕೆ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ಮತ ಎಣಿಕೆ ಕೇಂದ್ರಗಳಲ್ಲಿ 15 ಟೇಬಲ್ಗಳನ್ನು ಹಾಕಲಾಗುವುದು.ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ 8 ಪ್ರತ್ಯೇಕ ಟೇಬಲ್ ಅಳವಡಿಸಿ ಮೈಕ್ರೋ ಅಬ್ಸರ್ವರ್ಗಳ ಕಣ್ಗಾವಲಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಮತ ಎಣಿಕೆಯ ದಿನ ಸಂಜೆ 4 ಗಂಟೆಯವರೆಗೂ ಯಾವುದೇ ಕಾರಣಕ್ಕೂ ಫಲಿತಾಂಶ ಘೋಷಣೆ ಮಾಡುವುದಿಲ್ಲ. ಸಂಜೆ 5ರ ನಂತರವಷ್ಟೇ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದರು.
ಸುಪ್ರೀಂಕೋರ್ಟ್ ಆದೇಶದನ್ವಯ ವಿವಿ ಪ್ಯಾಟ್ಗಳಲ್ಲಿ ಮುದ್ರಿತವಾಗಿರುವ ಮತಗಳನ್ನು ಎಣಿಕೆ ಮಾಡಲಾಗುವುದು. ಪೋಸ್ಟಲ್ ಬ್ಯಾಲೆಟ್ ಎಣಿಕೆಯಲ್ಲಿ ಜಾಸ್ತಿ ವ್ಯತ್ಯಾಸ ಕಂಡು ಬಂದಲ್ಲಿ ಮತ್ತೊಮ್ಮೆ ರಿ ಕೌಂಟಿಂಗ್ ಮಾಡಲಾಗುವುದು ಎಂದು ಅವರು ಹೇಳಿದರು.
ಮೂರು ಕ್ಷೇತ್ರಗಳ ಮತ ಎಣಿಕೆಗೆ ಅಗತ್ಯವಿರುವಷ್ಟು ಸಿಬ್ಬಂದಿಯನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ. ಈ ಸಿಬ್ಬಂದಿಗಳಿಗೆ ಎರಡು ಹಂತದಲ್ಲಿ ಮತ ಎಣಿಕೆ ಪ್ರಕ್ರಿಯೆಯ ತರಬೇತಿ ನೀಡಲಾಗುತ್ತದೆ.
ಮೇ 16ರಂದು ನಡೆಯಲಿರುವ ಮೊದಲ ಹಂತದ ತರಬೇತಿಯಲ್ಲಿ ಯಾವ ಸಿಬ್ಬಂದಿ ಯಾವ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು.
ಮೇ 21ರಂದು ನಡೆಯಲಿರುವ ಎರಡನೆ ಹಂತದ ತರಬೇತಿಯಲ್ಲಿ ಯಾವ ಸಿಬ್ಬಂದಿ ಯಾವ ಟೇಬಲ್ನಲ್ಲಿ ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ ಎಂಬುದನ್ನು ಘೋಷಣೆ ಮಾಡಲಾಗುವುದು ಎಂದು ಮಂಜುನಾಥ ಪ್ರಸಾದ್ ವಿವರಿಸಿದರು.
ಸ್ಟ್ರಾಂಗ್ ರೂಂಗೆ ಬಿಗಿ ಭದ್ರತೆ: ಮೂರು ಲೋಕಸಭಾ ಕ್ಷೇತ್ರಗಳ ಮತ ಪೆಟ್ಟಿಗೆಗಳನ್ನಿಟ್ಟಿರುವ ಸ್ಟ್ರಾಂಗ್ ರೂಂಗೆ ಮೂರು ಸುತ್ತಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ಕುಮಾರ್ ತಿಳಿಸಿದರು.
ಭದ್ರತಾ ಕಾರ್ಯಕ್ಕೆ ಪ್ಯಾರಾ ಮಿಲಿಟರಿ ಪೋರ್ಸ್, ಸಿಎಸ್ಐಎಫ್ ಪಡೆಗಳು ಹಾಗೂ ಸಿವಿಲ್ ಪೊಲೀಸರನ್ನು ನಿಯೋಜಿಸಲಾಗಿದೆ.ಪ್ರತಿ ನಿತ್ಯ ಸುಮಾರು 135 ಮಂದಿ ಪೊಲೀಸರು ಮೂರು ಪಾಳಿಯ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಮೇ 23ರಂದು ನಡೆಯಲಿರುವ ಮತ ಎಣಿಕೆಗೆ ಪ್ರತ್ಯೇಕ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.