ಹುಬ್ಬಳ್ಳಿ,ಮೇ 4-ಬಿಜೆಪಿ ಸರ್ಕಾರ ರಚನೆಯ ಹಗಲುಗನಸು ಕಾಣುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ದಿನಗಳಿಂದ ಬಿಜೆಪಿಯವರು ಸರ್ಕಾರ ರಚಿಸುವ ಆಸೆ ಇಟ್ಟುಕೊಂಡಿದ್ದಾರೆ. ಅವರ ಆಸೆ ಫಲಿಸುವುದಿಲ್ಲ. ಮೇ 23ರ ಫಲಿತಾಂಶದ ನಂತರ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಬೀಳುತ್ತದೆ. ಮೇ 24ಕ್ಕೆ ಹೊಸ ಸರ್ಕಾರ ರಚನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಸರ್ಕಾರ ಸುಭದ್ರವಾಗಿದೆ. ನಾಲ್ಕು ವರ್ಷಗಳ ಕಾಲ ಅವಧಿ ಪೂರೈಸುತ್ತದೆ. ಲೋಕಸಭಾ ಚುನಾವಣೆ ಫಲಿತಾಂಶ ಕೂಡ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡುತ್ತಿಲ್ಲ. ಇದೊಂದು ವಿಚಿತ್ರವಾದ ಸನ್ನಿವೇಶ ಎಂದು ಆಯೋಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಆಯೋಗಕ್ಕೆ ಪತ್ರ ಬರೆದಿದ್ದೆವು. ಆದರೆ ಯಾವುದೇ ಸಭೆಗಳನ್ನು ಮಾಡಬಾರದು ಎಂದು ಸೂಚನೆ ನೀಡಿರುವುದರಿಂದ ಅಧಿಕಾರಿಗಳ ಜೊತೆ ಸಭೆ ಮಾಡಲು ಸಾಧ್ಯವಾಗುತ್ತಿಲ್ಲ. ನೀತಿ ಸಂಹಿತೆ ಕಾರಣಕ್ಕೆ 2 ತಿಂಗಳ ಕಾಲ ಸರ್ಕಾರ ಯಾವುದೇ ಕೆಲಸ ಮಾಡಲಾಗದೆ ಕೈ ಕಟ್ಟಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸುಮಲತಾ, ಚೆಲುವರಾಯ ಸ್ವಾಮಿ ಮತ್ತಿತರರು ನಡೆಸಿದ ಡಿನ್ನರ್ ಪಾರ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದಿನೇಶ್ ಗುಂಡೂರಾವ್ ಅವರು ಈ ಬಗ್ಗೆ ವರದಿ ತರಿಸಿಕೊಂಡು ಸಾಧಕ ಬಾಧಕ ನೋಡಿ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.