ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪುಸ್ತಕ ಬಹುಮಾನ ನೀಡಿಕೆ

ಬೆಂಗಳೂರು, ಮೇ 4- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2018 ನೇ ಸಾಲಿನ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕ ಹಾಗೂ ಅನುವಾದವನ್ನು ಕುರಿತ ಪುಸ್ತಕಗಳನ್ನು ಪುಸ್ತಕ ಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು ಹಾಗೂ ಪ್ರಕಾಶಕರಿಂದ ಆಹ್ವಾನಿಸಲಾಗಿದೆ.

ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ.

2018 ರ ಸಾಲಿನಲ್ಲಿ ಅನುವಾದ ಸಾಹಿತ್ಯವನ್ನು ಕುರಿತ ಅಧ್ಯಯನ ಪುಸ್ತಕಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ.ಪ್ರಥವ ಆವೃತ್ತಿಯಲ್ಲಿ 2018ನೇ ಸಾಲಿನಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳ ಬಗ್ಗೆ ಮಾಹಿತಿ ಇರುವವರು ಸಹ ಪುಸ್ತಕಗಳನ್ನು ಕಚೇರಿಗೆ ಕಳುಹಿಸಿ ಕೊಡಬಹುದಾಗಿದೆ.

ಬಹುಮಾನಿತ ಕೃತಿಗಳಿಗೆ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಅನುವಾದಿತ ಪ್ರಕಟಣೆಗಳ ಒಂದು ಪ್ರತಿಯನ್ನು ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056. ಅಥವಾ ಕಚೇರಿಗೆ ಖುದ್ದಾಗಿ ಅಥವಾ ಅಂಚೆ, ಕೊರಿಯರ್ ಮೂಲಕ ಮೇ 30 ರೊಳಗಾಗಿ ತಲುಪಿಸಬಹುದಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ.ಸಂ.23183311/12 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ