ಬೆಂಗಳೂರು, ಮೇ 4-ಶಿಕ್ಷಕರ ಸಂಘದಲ್ಲಿ ಶಿಕ್ಷಕಿಯರಿಗೆ ಪ್ರಾತಿನಿಧ್ಯ ನೀಡದ ಹಿನ್ನೆಲೆಯಲ್ಲಿ ಶಿಕ್ಷಕಿಯರ ಸಮಸ್ಯೆಗಳ ಪರಿಹಾರ ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ರಾಜ್ಯಮಟ್ಟದ ನೂತನ ಶಿಕ್ಷಕಿಯರ ಸಂಘ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾಮಳ್ಳೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 70ರಷ್ಟು ಶಿಕ್ಷಕಿಯರು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಸಂಘದಲ್ಲಿ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿ ಅನ್ವಯ ಅನುಮತಿ ನೀಡಬೇಕು. ಆದರೆ ಯಾವುದೇ ರೀತಿಯಲ್ಲೂ ಶಿಕ್ಷಕರ ಸಂಘದಲ್ಲಿ ಪ್ರಾತಿನಿಧ್ಯ ನೀಡದ ಹಿನ್ನೆಲೆಯಲ್ಲಿ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಂಘ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಕ್ಕೆ ಮಾನ್ಯತೆ ನೀಡಬೇಕು, ಶಿಕ್ಷಕರ ಸಂಘಕ್ಕೆ ನೀಡಿದಂತೆ ನಮ್ಮ ರಾಜ್ಯ ಸಂಘದ ಕಚೇರಿಗಾಗಿ ಶಿಕ್ಷಕರ ಸದನದಲ್ಲಿ ಒಂದು ಕೊಠಡಿಯನ್ನು ಕೊಡಬೇಕು ಎಂದು ಆಗ್ರಹಿಸಿದರು.
ಶಿಕ್ಷಕಿಯರ ಸಮಸ್ಯೆಗಳ ಕುರಿತು ನೇರವಾಗಿ ಚರ್ಚಿಸಲು ರಾಜ್ಯ ಜಿಲ್ಲಾ ಹಾಗೂ ತಾಲ್ಲೂಕುಗಳಲ್ಲಿ ಇಲಾಖಾ ಅಧಿಕಾರಿಗಳ ಸಮಯ ಕೊಡಬೇಕು ಮತ್ತು ನೇಮಕಾತಿಯಾದ ಎಲ್ಲರಿಗೂ ಹೊಸ ಪಿಂಚಣಿ ಯೋಜನೆ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.