ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದನ್ನು ಮರುಶೀಲಿಸಲು ಕೋರಿರುವ ಅರ್ಜಿ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಮತ್ತೊಂದು ಅಫಿಡವಿಟ್ ಸಲ್ಲಿಸಿದೆ.
2018ರ ಡಿ. 14ರಂದು ರಫೇಲ್ ಯುದ್ಧವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆಗಾಗಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಮಾಡಿರುವುದು ಸರಿಯಾದ ನಿರ್ಧಾರವಾಗಿದೆ. ಅಸತ್ಯದಿಂದ ಕೂಡಿದ ಮಾಧ್ಯಮ ವರದಿಗಳು ಅಥವಾ ಆಂತರಿಕ ಕಡತದ ಟಿಪ್ಪಣಿಗಳನ್ನು ಉದ್ದೇಶಪೂರ್ವಕವಾಗಿ ಆಯ್ದು ವಿಮರ್ಶೆ ನಡೆಸುವುದು ಮರುಪರಿಶೀಲನಾ ಅರ್ಜಿಗಳಿಗೆ ಪೂರಕವಾಗಿರಬಾರದು ಎಂದು ಹೇಳಿದೆ.
ಫೈಟರ್ ಜೆಟ್ ಮೇಲಿನ ಮರುಪರಿಶೀಲನಾ ವಿಚಾರಣೆಯು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹಾಗಾಗಿ ಮರುಪರಿಶೀಲನೆ ಕೋರಿರುವ ಅಫಿಡವಿಟ್ಗಳನ್ನು ಈ ಕ್ಷಣದಿಂದಲೇ ವಜಾಮಾಡಬೇಕು ಎಂದು ಸರ್ಕಾರ ಸುಪ್ರೀಂ ಕೋರ್ಟ್ನ್ನು ಕೇಳಿಕೊಂಡಿದೆ.
ಕಳೆದ ಮಾರ್ಚ್ನಲ್ಲಿ ಕೇಂದ್ರ ಸರ್ಕಾರವು, ರಕ್ಷಣಾ ಸಚಿವಾಲಯದಿಂದ ಕದ್ದ ರಹಸ್ಯ ದಾಖಲೆಗಳ ಆಧಾರದ ಮೇಲೆ ಮರುಪರಿಶೀಲನೆ ನಡೆಸಬೇಕು ಎಂದು ಅರ್ಜಿದಾರರು ಕೇಳಿದ್ದು, ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ಮನವಿ ಸಲ್ಲಿಸಿತ್ತು. ಬಳಿಕ ಮೂವರು ನ್ಯಾಯಾಧೀಶರುಳ್ಳ ಪೀಠವು, ಕೇಂದ್ರದ ಈ ಮನವಿಯನ್ನು ಸರ್ವಾನುಮತದಿಂದ ತಳ್ಳಿಹಾಕಿದ್ದರು.
ಮಾ. 14 ರಂದು ತನ್ನ ತೀರ್ಪನ್ನು ಮೀಸಲಿರಿಸಿದ್ದ ನ್ಯಾಯಾಲಯವು, ಮರುಪರಿಶೀಲನಾ ಅರ್ಜಿಯ ವಿಚಾರಣೆಗೂ ಮುನ್ನವೇ ಕೇಂದ್ರದ ಆಕ್ಷೇಪಣಾ ಅರ್ಜಿಯನ್ನು ವಿಚಾರಣೆ ಕೈಗೊಳ್ಳುತ್ತದೆ ಎಂದು ಹೇಳಿತ್ತು.
ಕಳೆದ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
Centre files fresh affidavits in Rafale review case in SC