ಬೆಂಗಳೂರು,ಮೇ3- ಸಂಸ್ಕಾರವಂತ ಮನುಸ್ಸು ಇದ್ದಾಗ ಮಾತ್ರ ದೇಶ ಉದ್ದಾರವಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಆದಿಚುಂಚನಗಿರಿ ಮಠದಲ್ಲಿ 22ನೇ ಮಹಿಳಾ ಜಾಗೃತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ದೇಶ ಉದ್ದಾರವಾಗಲು ಮೊದಲು ಮನುಷ್ಯ ಉದ್ಧಾರ ಆಗಬೇಕು. ಮನುಷ್ಯ ಉದ್ಧಾರವಾಗಬೇಕಾದರೆ ಆತನ ಮನಸ್ಸು ಸಂಸ್ಕಾರ ಹೊಂದಬೇಕು.ಅಂತಹ ಸಂಸ್ಕಾರ ಇಂದಿನ ಆಧುನಿಕ ಶಿಕ್ಷಣದಿಂದ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕಾಗಿಯೇ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವುದಕ್ಕಾಗಿ, ನೈತಿಕತೆಯನ್ನು ಬೆಳೆಸುವುದಕ್ಕಾಗಿ ಶ್ರೀ ಮಠದ ವತಿಯಿಂದ ಕಳೆದ 22 ವರ್ಷಗಳಿಂದ ರಾಜ್ಯಮಟ್ಟದ ಮಹಿಳಾ ಜಾಗೃತಿ ಶಿಬಿರವನ್ನು ಹಮ್ಮಿಕೊಂಡು ಮಕ್ಕಳಲ್ಲಿ ಸಂಸ್ಕಾರವನ್ನು ಮೈಗೂಡಿಸಲಾಗುತ್ತಿದೆ ಎಂದರು.
ಬೆಟ್ಟದ ತುದಿಯಲ್ಲಿರುವ ಕಲ್ಲು ಉರುಳಿದರೆ ಆಗುವ ಹಾನಿ ಹೆಚ್ಚು.ಬೆಟ್ಟದ ತಪ್ಪಲಿನಲ್ಲಿರುವ ಕಲ್ಲು. ಸೃಷ್ಟಿಯ ವಿಕಾಸದಲ್ಲಿ ಹೆಣ್ಣು ಮಕ್ಕಳು ಅತ್ಯಂತ ಉತ್ಕೃಷ್ಟವಾದವರು. ಹೆಣ್ಣು ಮಕ್ಕಳು ಸುಸಂಸ್ಕೃತರಾದರೆ ಅಂತವರ ಮನೆಯೂ ಸುಸಂಸ್ಕೃತವಾಗಿರಲು ಸಾಧ್ಯ.
ನಮ್ಮ ಶಾಲಾ ಕಾಲೇಜುಗಳಲ್ಲಿ ಮನುಷ್ಯನ ನೈತಿಕ ಬದುಕಿಗೆ ಪೂರಕವಾದ ಶಿಕ್ಷಣವನ್ನು ನೀಡುವುದಿಲ್ಲ. ಬದುಕಿನ ಸಮಸ್ಯೆಗಳಿಗೆ ಶಾಲೆಗಳಲ್ಲಿ ನೀಡುವ ಗಣಿತ ವಿಜ್ಞಾನದ ಸೂತ್ರಗಳು ಉಪಯೋಗಕ್ಕೆ ಬರುವುದಿಲ್ಲ. ಸಮಸ್ಯೆ ಹೊರಗಡೆ ಇಲ್ಲ. ಅದು ನಮ್ಮ ಒಳಗೇ ಇದೆ.ಆ ಸಮಸ್ಯೆಯನ್ನು ಬಗೆಹರಿಸಲು ಮನುಷ್ಯ ಸಹನಾಶೀಲ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಮನಸ್ಸಿಗೆ ಸಂಸ್ಕಾರ ಕೊಟ್ಟರೆ ಮನುಷ್ಯನ ಬದುಕು ಉದ್ಧಾರವಾಗುತ್ತದೆ ಎಂಬ ಆ ನಿಟ್ಟಿನಲ್ಲಿ ಈ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಅತ್ಯಧಿಕ ಅಂಕಗಳನ್ನು ಗಳಿಸಿ ಉನ್ನತ ಅಧಿಕಾರವನ್ನು ಹೊಂದುವುದೇ ಮುಖ್ಯವಲ್ಲ. ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡಲು ಮಕ್ಕಳಲ್ಲಿ ಸಂಸ್ಕಾರವನ್ನು ಮೈಗೂಡಿಸಬೇಕು. ಈ ನಿಟ್ಟಿನಲ್ಲಿ ಗುರೂಜಿರವರು ಮಹಿಳಾ ಜಾಗೃತಿ ತರಬೇತಿ ಶಿಬಿರವನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.
ಮನುಷ್ಯನ ನೆಮ್ಮದಿಯ ಬದುಕಿಗೆ ಮೊದಲಿಗೆ ಆತನಲ್ಲಿರುವ ದೌರ್ಬಲ್ಯಗಳನ್ನು ತೊಡೆದು ಹಾಕಬೇಕು ಹಾಗೂ ಮಕ್ಕಳ ಭವಿಷ್ಯ ಸುಂದರಗೊಳಿಸುವ ನಿಟ್ಟಿನಲ್ಲಿ ಅವರ ಜೀವನಕ್ಕೆ ಅವಶ್ಯಕವಾದ ಸಂಸ್ಕಾರವನ್ನು ಮೈಗೂಡಿಸಲು ಈ ಶಿಬಿರ ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ,ಶ್ರೀ ಶಂಭುನಾಥಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಆರ್.ನರಸಿಂಹಯ್ಯ ಮತ್ತಿತರರು ಪಾಲ್ಗೊಂಡಿದ್ದರು.