ಕೊಚ್ಚಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಕುತೂಹಲಭರಿತ ಮಾಹಿತಿ ನೀಡಿರುವ ಕೇರಳದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್ , ರಾಹುಲ್ ಜನಿಸಿದಾಗ ನವಜಾತ ಶಿಸುವನ್ನು ಎತ್ತಿಕೊಂಡವರಲ್ಲಿ ನಾನೇ ಮೊದಲನೆಯವಳು ಎಂದು ತಿಳಿಸಿದ್ದಾರೆ.
ರಾಹುಲ್ ಅವರ ಪೌರತ್ವವನ್ನು ಯಾರೂ ಪ್ರಶ್ನಿಸಬಾರದು. ರಾಹುಲ್ ಜನಿಸಿದಾಗ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನಾನು ನರ್ಸ್ ಆಗಿದ್ದು, ನವಜಾತ ಶಿಶುವನ್ನು ನಾನು ಎತ್ತಿಕೊಂಡಿದ್ದೆ ಎಂದು 72 ವರ್ಷದ ರಾಜಮ್ಮ ವವಾತಿಲ್ ಹೇಳಿದ್ದಾರೆ.
1970 ರ ಜೂ. 19 ರಂದು ರಾಹುಲ್ ಜನಿಸಿದಾಗ ರಾಜಮ್ಮ ಅವರು ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ತರಬೇತಿ ನಿರತ ನರ್ಸ್ ಆಗಿದ್ದರು. ನವಜಾತ ಶಿಶುವನ್ನು ಎತ್ತಿಕೊಂಡವರಲ್ಲಿ ನಾನೇ ಮೊದಲನೆಯವಳಾಗಿದ್ದೆ ಎಂದು ಅವರು ತಿಳಿಸಿದ್ದಾರೆ.
ಮಗು ಜನಿಸಿದಾಗ ಅದನ್ನು ನೋಡಿದ ಕೆಲವೇ ಮಂದಿಗಳಲ್ಲಿ ನಾನು ಒಬ್ಬಳಾಗಿದ್ದೆ ಮತ್ತು ಮಗುವನ್ನು ಎತ್ತಿಕೊಂಡ ಮೊದಲಿಗಳಲ್ಲಿ ನಾನೇ ಅದೃಷ್ಟವಂತೆ.
ರಾಹುಲ್ ಜನ್ಮಕ್ಕೆ ನಾನು ಸಾಕ್ಷಿಯಾಗಿದ್ದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನನ್ನು ನೋಡಲು ನಾವು ರೋಮಾಂಚನಗೊಂಡಿದ್ದೆವು ಎಂದು ತಿಳಿಸಿದ್ದಾರೆ.
49 ವರ್ಷಗಳ ನಂತರ ಮುದ್ದಾದ ಮಗು ಇದೀಗ ಕಾಂಗ್ರೆಸ್ ಅಧ್ಯಕ್ಷನಾಗಿ ಮತ್ತು ವಯನಾಡಿನಿಂದ ಸ್ಪರ್ಧಿಸುತ್ತಿದೆ. ಸೋನಿಯಾ ಗಾಂಧಿ ಅವರನ್ನು ಡೆಲಿವರಿಗಾಗಿ ಕರೆದುಕೊಂಡು ಬಂದಾಗ ಹೆರಿಗೆ ಕೊಠಡಿಯ ಹೊರಗೆ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಮತ್ತು ಚಿಕ್ಕಪ್ಪ ಸಂಜಯ್ ಗಾಂಧಿ ನಿಂತು ಕಾಯುತ್ತಿದ್ದರು ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ತರಬೇತಿಯನ್ನು ಮುಗಿಸಿದ್ದ ವವಾತಿಲ್ ಬಳಿಕ ಭಾರತೀಯ ಸೇನೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದಾರೆ.
ಸ್ವಯಂ ನಿವೃತ್ತಿ ಪಡೆದ ನಂತರ 1987ರಲ್ಲಿ ಕೇರಳಕ್ಕೆ ಬಂದ ಅವರು ಸದ್ಯ ಸುಲ್ತಾನ್ ಭಾತರಿ ಬಳಿಯ ಕಲ್ಲೂರ್‌ನಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ಬಾರಿ ವಯನಾಡ್‌ಗೆ ರಾಹುಲ್ ಭೇಟಿ ನೀಡಿದಾಗ ಅವರನ್ನು ಭೇಟಿಯಾಗಬಹುದೆಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಪೌರತ್ವವನ್ನು ಪ್ರಶ್ನಿಸಿ ದೂರು ನೀಡಿರುವುದು ನನಗೆ ದುಃಖ ತರಿಸಿದೆ. ರಾಹುಲ್ ಗಾಂಧಿ ಅವರು ಮೂಲತಃ ಭಾರತೀಯ ಪೌರತ್ವವನ್ನು ಹೊಂದಿದ್ದಾರೆ ಮತ್ತು ಸುಬ್ರಮಣಿಯನ್ ಅವರು ಸಲ್ಲಿಸಿರುವ ದೂರು ಆಧಾರರಹಿತ. ರಾಹುಲ್ ಗಾಂಧಿಯ ಜನ್ಮದ ಕುರಿತಾದ ಎಲ್ಲ ದಾಖಲೆಗಳು ಆಸ್ಪತ್ರೆಯಲ್ಲಿವೆ ಎಂದು ಹೇಳಿದ್ದಾರೆ.