ಇಸ್ಲಾಮಾಬಾದ್: ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಿದ ಪರಿಣಾಮ ಬಾಲ ಮುದುರಿಕೊಂಡಿರುವ ಪಾಕಿಸ್ತಾನ ಇದೀಗ ಅಜರ್‌ಗೆ ದಿಗ್ಬಂಧನ ಹೇರಿದೆ.
ಮಸೂದ್ ಅಜರ್‌ನ ಎಲ್ಲ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನ ಅಧಿಕೃತವಾಗಿ ಆದೇಶ ಹೊರಡಿಸಿದೆ. ಎಲ್ಲೂ ಪ್ರಯಾಣಿಸದಂತೆ ನಿಷೇಧ ಹೇರಿದೆ.
ಜತೆಗೆ ಶಸ್ತ್ರಾಸ್ತ್ರ, ಯುದ್ಧಸಾಮಗ್ರಿಗಳ ಮಾರಾಟ ಮತ್ತು ಕೊಳ್ಳುವಿಕೆಯನ್ನು ನಿಷೇಧಿಸಿದೆ. ಪಾಕಿಸ್ತಾನ ಸರಕಾರ ಮಸೂದ್ ಅಜರ್ ವಿರುದ್ಧ ರೆಸಲ್ಯೂಷನ್ 2368(2017) ಜಾರಿ ಆದೇಶ ಹೊರಡಿಸಿದೆ ಎಂದು ಅಲ್ಲಿನ ವಿದೇಶಾಂಕ ಸಚಿವಾಲಯ ಸ್ಪಷ್ಟ ಪಡಿಸಿದೆ.
40 ಸಿಆರ್‌ಪಿಎಫ್ ಯೋಧರ ಆಹುತಿಗೈದ ಪುಲ್ವಾಮಾ ಆತ್ಮಾಹುತಿ ದಾಳಿಯ ಹೊಣೆಯನ್ನು ಜೈಶೆ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿತ್ತು. ಇದಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರತವೂ ಸೇರಿ ವಿಶ್ವದ ಪಾಲಿಗೆ ಕಂಟಕನಾಗಿರುವ ಪಾಕಿಸ್ತಾನ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್‌ನನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ‘ಜಾಗತಿಕ ಉಗ್ರ’ ಎಂದು ಘೋಷಿಸಿದೆ. ಇದಕ್ಕೆ ಅಂತಾರಾಷ್ಟ್ರೀಯ ಸಮುದಾಯ ಸಂತಸ ವ್ಯಕ್ತಪಡಿಸಿದೆ. ಮಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಅಡ್ಡಗಾಲು ಹಾಕುತ್ತಲೇ ಬಂದಿದ್ದ ಚೀನಾದ ಪ್ರಭಾವವನ್ನು ಬಗ್ಗು ಬಡಿಯುವಲ್ಲಿ ಭಾರತ ಕೊನೆಗೂ ಯಶಸ್ವಿಯಾಗಿದ್ದು, ಇದೊಂದು ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.