ಬೆಂಗಳೂರು, ಮೇ 3- ಬಂಡಾಯದ ಬಾವುಟ ಹಿಡಿದಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಇತರರ ಜತೆಗಿನ ಸಂಧಾನದ ನಿರಾಸಕ್ತಿ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ರಹಸ್ಯ ಸಭೆಗಳಿಗೆ ಪರೋಕ್ಷ ಕುಮ್ಮಕ್ಕು ನೀಡಲಾಗುತ್ತಿದೆ ಎಂಬುದು ಕೇಳಿ ಬರುತ್ತಿರುವ, ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ನಾಯಕರೇ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ವಿಚಾರದ ಬೆನ್ನಲೇ ಚರ್ಚೆಗಳು ರಾಜಕೀಯ ವಲಯದಲ್ಲಿ ಹೆಚ್ಚಾಗುತ್ತಿವೆ.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ 37ಸ್ಥಾನ ಗಳಿಸಿದ್ದ ಜೆಡಿಎಸ್‍ಗೆ ಕಾಂಗ್ರೆಸ್ ಹೈಕಮಾಂಡ್ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು. ನಿಗಮ ಮಂಡಳಿ ನೇಮಕಾತಿ, ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಷಯದಲ್ಲೂ ಜೆಡಿಎಸ್‍ಗೆ ಮಣೆ ಹಾಕುವುದು ಅನಿವಾರ್ಯವಾಗಿ ಹೋಗಿತ್ತು. ಇದು ಜೆಡಿಎಸ್ ಜತೆ ಜಿದ್ದಾಜಿದ್ದಿನ ರಾಜಕೀಯ ಮಾಡಿಕೊಂಡು ಬಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ವಲಸಿಗ ಕಾಂಗ್ರೆಸಿಗರಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು.
ಲೋಕಸಭೆ ಚುನಾವಣೆವರೆಗೂ ಎಲ್ಲವನ್ನು ಸಹಿಸಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದ್ದರಿಂದ ಸದ್ದಿಲ್ಲದೆ ಅವಡುಗಚ್ಚಿಕೊಂಡಿದ್ದರು.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ನಿಧಾನವಾಗಿ ಗರಿ ಬಿಚ್ಚಲಾರಂಬಿಸಿವೆ. ಈ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅತೃಪತ್ತರು, ಬಂಡಾಯಗಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕಾದ ಕಾಂಗ್ರೆಸ್‍ನ ಪ್ರಮುಖರು ಪ್ರಜ್ಞಾ ಪೂರಕವಾಗಿಯೆ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವರಾದ ಜೆಡಿಎಸ್ ಜತೆ ಹಳೆ ಮೈಸೂರು ಭಾಗದಲ್ಲಿ ಸೆಟೆದು ನಿಂತಿರುವ ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಮಾಗಡಿ ಬಾಲಕೃಷ್ಣ ಹಾಗೂ ಮತ್ತಿತರರು ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಿದ್ದಂತೆ ಒಂದು ವೇಳೆ ಅವರ ವಿರುದ್ಧ ಕ್ರಮ ಕೈಗೊಂಡರೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ದುರ್ಬಲಗೊಳ್ಳುತ್ತದೆ ಎಂದು ಸಬೂಬು ನೀಡಿ ರಹಸ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು ಸಹಿಸಿಕೊಳ್ಳಬೇಕಾದ ಇಕ್ಕಟ್ಟಿನ ಪರಿಸ್ಥಿತಿಯನ್ನು ರಾಜ್ಯ ನಾಯಕರು ತಂದಿಟ್ಟಿದ್ದಾರೆ.
ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಟಹಳ್ಳಿ, ನಾಗೇಂದ್ರ, ಕಂಪ್ಲಿ ಗಣೇಶ್, ಪ್ರತಾಪ್‍ಗೌಡ ಪಾಟೀಲ್ ಮತ್ತಿರರು ಪಕ್ಷದ ವಿರುದ್ಧ ಅಸಮಾಧಾನಗೊಂಡು ಬಿಜೆಪಿಯ ಸಂಪರ್ಕದಲ್ಲಿದ್ದರೂ ಅವರ ಜತೆ ಮಾತುಕತೆ ನಡೆಸಿ ಸಮಾಧಾನ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ರಮೇಶ್ ಜಾರಕಿಹೊಳಿ, ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧ ಅಸಮಾಧಾನ ಹೊರಹಾಕಿ ಖಾರವಾದ ಹೇಳಿಕೆ ನೀಡಿದಾಗ ಅಸಮಾಧಾನವನ್ನು ಸರಿಪಡಿಸಲು ಮಾತುಕತೆ ನಡೆಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂಧಾನ ಮುಗಿದ ಅಧ್ಯಾಯ ಎಂಬರ್ಥದಲ್ಲಿ ಮಾತನಾಡಿದರು.
ಬಂಡಾಯದ ಬಾವುಟ ಹಿಡಿದಿರುವವರು ಯಾರ ಬೆಂಬಲಿಗರು ಎಂಬುದು ಗುಟ್ಟಾಗಿ ಉಳಿದಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಮೇಲ್ನೋಟಕ್ಕೆ ಎಲ್ಲ ನಾಯಕರು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಒಳಗೊಳಗೆ ವಾತಾವರಣವನ್ನು ಹದಗೆಡಿಸುವ ಬೆಳವಣಿಗೆಗಳು ನಡೆಯುತ್ತಲೇ ಇವೆ. ರಾಜ್ಯ ಕಾಂಗ್ರೆಸ್ ನಾಯಕರುಗಳ ನಡುವಿನ ಗುಂಪುಗಾರಿಕೆ ಮೈತ್ರಿ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಮೂಲ ಕಾಂಗ್ರೆಸಿಗರ ಪೈಕಿ ಬಹಳಷ್ಟು ಮಂದಿಗೆ ಪಕ್ಷದ ಮೇಲೆ ಹಿಡಿತ ಇಲ್ಲದಂತಾಗಿದೆ.
ಇತ್ತೀಚೆಗೆ ಕಾಂಗ್ರೆಸ್‍ಗೆ ಬಂದು ಸಾಕಷ್ಟು ಅಧಿಕಾರ ಅನುಭವಿಸಿದವರು ಪಕ್ಷದ ಸಂಘಟನೆ ಮೇಲೆ ಬಲವಾದ ಹಿಡಿತ ಸಾಧಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈ ವರೆಗೂ ಪ್ರಭಾವಿ ನಾಯಕರು ಎಂಬ ಕಾರಣಕ್ಕಾಗಿ ವಲಸಿಗರ ಮಾತುಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬಂದಿದೆ. ಮೂಲ ಕಾಂಗ್ರೆಸಿಗರು ಪಕ್ಷದ ಹೇಳಿದ್ದಕ್ಕೆ ತಲೆ ಆಡಿಸಿಕೊಂಡು ತಮ್ಮ ಪಾಡಿಗೆ ತಾವು ಕಾಲ ಕಳೆಯುತ್ತಿದ್ದಾರೆ. ಆದರೆ ವಲಸಿಗ ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಪದೇ ಪದೇ ಒಂದಲ್ಲ ಒಂದು ರೀತಿ ಚಟುವಟಿಕೆ ಯಲ್ಲಿ ತೊಡಗುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿದ್ದಾರೆ.