ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯ ರಾಜಕಾರಣದ ತಲೆಬಿಸಿ ಇನ್ನೂ ಕಡಿಮೆಯಾಗಿಲ್ಲ. ಬುಧವಾರ ರಾತ್ರಿ ಬೆಂಗಳೂರು ಏಟ್ರಿಯಾ ಹೋಟೆಲ್ನಲ್ಲಿ ಸುಮಲತಾ ಅಂಬರೀಶ್ ಜೊತೆಗೆ ಮಂಡ್ಯ ಬಂಡಾಯ ಕಾಂಗ್ರೆಸ್ಸಿಗರು ಡಿನ್ನರ್ ಪಾರ್ಟಿ ನಡೆಸಿದ್ದು ಕಾಂಗ್ರೆಸ್- ಜೆಡಿಎಸ್ ನಾಯಕರ ನೆಮ್ಮದಿಯನ್ನು ಕಲಕಿತ್ತು.
ನಿನ್ನೆ ಈ ಬಗ್ಗೆ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟನೆಯನ್ನೂ ನೀಡಿದ್ದರು. ಅಲ್ಲದೆ, ಸಿಎಂ ತಮ್ಮ ಅಧಿಕಾರದ ಪ್ರಭಾವ ಬಳಸಿ ಹೋಟೆಲ್ನಲ್ಲಿದ್ದ ಪೊಲೀಸರಿಂದಲೇ ಡಿನ್ನರ್ ಪಾರ್ಟಿಯ ವಿಡಿಯೋ ಲೀಕ್ ಮಾಡಿಸಿದ್ದಾರೆ. ನಾವು ಹೋದಲ್ಲೆಲ್ಲ ಗೂಢಚಾರರನ್ನಿಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಾಜಿ ಸಿದ್ದರಾಮಯ್ಯನವರ ಆಪ್ತರೇ ಈ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರು ಎಂಬುದು ಕಾಂಗ್ರೆಸ್ಗೆ ಮುಜುಗರ ಉಂಟಾಗಲು ಕಾರಣವಾಗಿತ್ತು. ಈ ಬಗ್ಗೆ ನಿನ್ನೆ ಸಿದ್ದರಾಮಯ್ಯ ಮಾಹಿತಿಯನ್ನೂ ಕಲೆಹಾಕಿದ್ದರು.
ಸುಮಲತಾ ಜೊತೆ ಮಂಡ್ಯ ಬಂಡಾಯ ಕಾಂಗ್ರೆಸ್ಸಿಗರು ಡಿನ್ನರ್ ನಡೆಸಿದ ವಿಚಾರವಾಗಿ ಚರ್ಚಿಸಲು ಮಂಡ್ಯ ಬಂಡಾಯ ನಾಯಕರು ಇಂದು ಮಧ್ಯಾಹ್ನದೊಳಗೆ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಲಿದ್ದಾರೆ. ಕಾಂಗ್ರೆಸ್ ಬಂಡಾಯ ನಾಯಕರಿಂದ ಸುಮಲತಾ ಜೊತೆ ಡಿನ್ನರ್ ಕುರಿತು ಸಿದ್ದರಾಮಯ್ಯ ಮಾಹಿತಿ ಪಡೆಯಲಿದ್ದಾರೆ. ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಹೆಚ್ ಸಿ ಬಾಲಕೃಷ್ಣ ಇಂದು ಸಿದ್ದರಾಮಯ್ಯನವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಮಂಡ್ಯ ಕಾಂಗ್ರೆಸ್ಸಿಗರಿಗೆ ಜೆಡಿಎಸ್ ಅಭ್ಯರ್ಥಿಯ ಬಗ್ಗೆ ಅಸಮಾಧಾನವಿದ್ದುದು ಮೊದಲೇ ಗೊತ್ತಿದ್ದರಿಂದ ಸದ್ಯ ಮಂಡ್ಯ ಕಾಂಗ್ರೆಸ್ಸಿಗರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.