ಫನಿ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ ಒಡಿಶಾ, ಪಶ್ಚಿಮ ಬಂಗಾಳ; ಹಲವೆಡೆ ಭಾರೀ ಭೂಕುಸಿತ

ಭುವನೇಶ್ವರ: ಒಡಿಶಾದ ಧಾರ್ಮಿಕ ಸ್ಥಳವಾದ ಪುರಿಗೆ ಫನಿ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 175 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ಚಂಡಮಾರುತದಿಂದಾಗಿ ಪುರಿಯಲ್ಲಿ ಭೂ ಕುಸಿತ ಸಂಭವಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 43ವರ್ಷಗಳಲ್ಲಿಯೇ ಕಂಡರಿಯದ ಬೇಸಿಗೆಯ ಭೀಕರ ಚಂಡಮಾರುತ ಇದಾಗಿದ್ದು, ಈಗಾಗಲೇ ಸರ್ಕಾರ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಭೂ ಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಉನ್ನತ ಮಟ್ಟದ ಸಮಿತಿ ಸಭೆ ಇಂದು ಭುವನೇಶ್ವರದಲ್ಲಿ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮುಂದಾಗಿದ್ದಾರೆ.

ಭೂಕುಸಿತದ ನಿರ್ವಹಣೆ, ಜನರ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆಯಾಗಲಿದೆ.

ಚಂಡಮಾರುತದಿಂದಾಗಿ ಭೂಕುಸಿತ ಸಂಭವಿಸುತ್ತಿದ್ದು, ಮಧ್ಯಾಹ್ನದವರೆಗೆ ಭೂ ಕುಸಿತ ಮುಂದುವರೆಯುವ ಸಾಧ್ಯತೆಯಿದೆ. ಮನೆಯಿಂದ ಹೊರ ಬರದಂತೆ ಜನರಿಗೆ ಮನವಿ ಮಾಡಲಾಗಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ. ಭೀಕರ ಚಂಡಮಾರುತದಿಂದಾಗಿ ಪುರಿಯಲ್ಲಿ ಮರ ಉರುಳಿಬಿದ್ದ ಪರಿಣಾಮ ಸಖಿಗೋಪಾಲ್​ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಪುರಿ ಮತ್ತು ಗಜಾಮ್​ಗಳಲ್ಲಿ ಹತ್ತು ಲಕ್ಷ​ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 4.3 ಲಕ್ಷ ಜನರಿಗೆ ಈಗಾಗಲೇ  ಸುರಕ್ಷಿತ ವಸತಿ ಕಲ್ಪಿಸಲಾಗಿದೆ. ಈ ಜನರಿಗೆ ಆಹಾರ ಒದಗಿಸಲು 5000 ಅಡುಗೆ ಮನೆಯನ್ನು ತೆರೆಯಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ತಿಳಿಸಿದ್ದಾರೆ.

ಫನಿ ಚಂಡಮಾರುತದಿಂದಾಗಿ 9 ಜಿಲ್ಲೆಗಳ 10 ಸಾವಿರ ಗ್ರಾಮ ಹಾಗೂ 52 ನಗರಗಳು ಹಾನಿಗೆ ಒಳಗಾಗಿವೆ. ಪುರಿ ಹಾಗೂ ಭುವನೇಶ್ವರ ಜಿಲ್ಲೆಗಳು ಅಧಿಕ ಹಾನಿಗೆ ಒಳಗಾಗಿದೆ.

ಫನಿ ಚಂಡ ಮಾರುತದ ಭೀಕರತೆ ಹೇಗಿದೆ ಎಂಬುದರ ಕುರಿತಾಗಿ ಪಿಐಬಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಕಿವಿಗಡಚುವ ಶಬ್ಧ ಈ ವಿಡಿಯೋದಲ್ಲಿದ್ದು, ಗಾಳಿಯ ವೇಗ ಎಷ್ಟಿದೆ ಎಂಬುದು ಕೂಡ ತಿಳಿಯಲಿದೆ. ಜೋರಾಗಿ ಬೀಸುವ ಗಾಳಿಯಿಂದಾಗಿ ಮಳೆ ಕೂಡ ಗಾಳಿ ಜೊತೆಯಲ್ಲಿಯೇ ಜೋರಾಗಿ ಸಾಗುವ ದೃಶ್ಯ ಕಂಡು ಬಂದಿದೆ.

ಒಡಿಶಾದಲ್ಲಿ ಅಪ್ಪಳಿಸಿರುವ ಚಂಡಮಾರುತದಿಂದ ಕೊಲ್ಕತ್ತಾದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಖರಗ್​ಪುರದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೀಡು ಬಿಟ್ಟಿದ್ದು, ಕರಾವಳಿ ತೀರದಲ್ಲಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಎರಡು ದಿನಗಳ ಚುನಾವಣಾ ಪ್ರಚಾರಕ್ಕೆ ಅವರು ಬ್ರೇಕ್​ ನೀಡಿದ್ದಾರೆ.

ಪೂರ್ವ ಮತ್ತು ಪಶ್ಚಿಮ ಮಣಿಪುರ, ಉತ್ತರ 24 ಪರಗಣಸ್​, ಹೌರಾ, ಹೂಗ್ಲಿ, ಜಗ್ರಾಮ್​ ಕೂಡ ಹಾನಿಗೆ ಒಳಗಾಗುವ ಸಾಧ್ಯತೆ ಇದೆ. ಆಂಧ್ರದಲ್ಲಿ ಶ್ರೀಕಾಕುಳಂ, ವಿಶಾಖಪಟ್ಟಣಂನಲ್ಲಿ ಕೂಡ ಫನಿ ಚಂಡಮಾರುತ ಅಬ್ಬರ ತೋರಲಿದೆ.

ಗುರುವಾರ ಮಧ್ಯರಾತ್ರಿಯಿಂದಲೇ ಭುವನೇಶ್ವರದಲ್ಲಿ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಕೊಲ್ಕತ್ತಾದಲ್ಲಿ ಶುಕ್ರವಾರ ಬೆಳಗ್ಗೆಯಿಂದ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಅಬ್ಬರಕ್ಕೆ ನೂರಾರು ಮರಗಳು ಬುಡಮೇಲಾಗಿದೆ.

ಪೂರ್ವ ಕರಾವಳಿಯ 10ಕ್ಕೂ ಹೆಚ್ಚು ಟ್ರೈನ್​ ಸೇವೆಯನ್ನು ರದ್ದು ಗೊಳಿಸಿದೆ. ಟ್ರೈನ್​ ಸೀಟು ಕಾದಿರಿಸಿದ್ದ ಜನರಿಗೆ ಹಣವನ್ನು ಮರುಕಳಿಸುವುದಾಗಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ