ನವದೆಹಲಿ: ದೇಶದಲ್ಲಿ ಫನಿ ಚಂಡಮಾರುತದ ಭೀತಿ ಎದುರಾಗಿದ್ದು, 20 ವರ್ಷಗಳ ಬಳಿಕ ಬೀಸುತ್ತಿರುವ ಅತಿ ಭಯಾನಕ ಸೈಕ್ಲೋನ್ ಇದಾಗಿರಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ, ಚಂಡಮಾರುತದ ಪರಿಣಾಮದ ಕುರಿತು ಸಹಜವಾಗಿಯೇ ಜನರಿಗೆ ಆತಂಕ ಶುರುವಾಗಿದೆ.
ಮುಖ್ಯವಾಗಿ ಒರಿಸ್ಸಾದಲ್ಲಿ ಈ ಚಂಡಮಾರುತದ ಪರಿಣಾಮ ಹೆಚ್ಚಾಗಿರಲಿದ್ದು, ಇಂದು ಫನಿ ಚಂಡಮಾರುತ ಒರಿಸ್ಸಾ ಕಡಲತೀರವನ್ನು ತಲುಪಲಿದೆ. ಇಲ್ಲಿಯ ಪುರಿಯಲ್ಲಿ ಇಂದು ಬೆಳಗ್ಗೆ 9.30ರ ವೇಳೆಗೆ ಭಾರೀ ಭೂಕುಸಿತವಾಗುವ ಮುನ್ನೆಚ್ಚರಿಕೆ ಸಿಕ್ಕಿರುವುದರಿಂದ ಒರಿಸ್ಸಾ ಸರ್ಕಾರ 11 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಅಲ್ಲದೆ, ಎತ್ತರದ ಮತ್ತು ಸುರಕ್ಷಿತ ಸ್ಥಳದಲ್ಲಿರುವವರಿಗೆ ಮನೆಯ ಹೊರಗೆ ಬಾರದಂತೆ ಎಚ್ಚರಿಕೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಒಡಿಶಾ ರಾಜಧಾನಿ ಭುವನೇಶ್ವರದ ಅಂತಾರಾಷ್ಟ್ರ್ಯೀ ವಿಮಾನ ನಿಲ್ದಾಣದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲ ವಿಮಾನಗಳ ಹಾರಾಟ ಬಂದ್ ಆಗಿದೆ.
ಮುಖ್ಯವಾಗಿ ಒರಿಸ್ಸಾ, ತಮಿಳುನಾಡು, ಕೇರಳ, ಪುದುಚೆರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತ ಬೀಸಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲಿ ಗಂಟೆಗೆ 170ರಿಂದ 200 ಕಿ.ಮೀ. ವೇಗದಲ್ಲಿ ಫನಿ ಅಪ್ಪಳಿಸಲಿದೆ. ಹೀಗಾಗಿ, ಈಗಾಗಲೇ ನೌಕಾದಳ, ಸೇನಾಪಡೆ ಮತ್ತು ಕರಾವಳಿ ಭದ್ರತಾ ಪಡೆ ಸಿಬ್ಬಂದಿಯನ್ನು ಸೂಕ್ಷ್ಮ ಮತ್ತು ಹೆಚ್ಚು ಅಪಾಯಕಾರಿ ಜಾಗಗಳಲ್ಲಿ ನಿಯೋಜನೆ ಮಾಡಲಾಗಿದೆ.
ಈಗಾಗಲೇ ಭೂಕುಸಿತದ ಅಲರ್ಟ್ ದೊರೆತಿರುವುದರಿಂದ ನೌಕಾದಳ 3 ಶಿಪ್ಗಳೊಂದಿಗೆ ಜನರ ರಕ್ಷಣೆಗೆ ಸಜ್ಜಾಗಿ ನಿಂತಿದೆ. ಸಹ್ಯಾದ್ರಿ, ರಣವೀರ್, ಕಡಮಟ್ ಬೋಟ್ಗಳು ವೈದ್ಯಕೀಯ ವಸ್ತುಗಳು, ಪರಿಹಾರ ಸಾಮಗ್ರಿಗಳೊಂದಿಗೆ ಸಿದ್ಧವಾಗಿವೆ. ಇದರಿಂದ ಹೆಚ್ಚಿನ ಅಪಾಯವಾಗದಂತೆ ತಡೆಗಟ್ಟಿ ಜನರನ್ನು ರಕ್ಷಿಸುವ ಜವಾಬ್ದಾರಿ ನಮ್ಮದು. ಭೂಕುಸಿತವಾಗುವ ವೇಳೆ ಯಾರೂ ಮನೆಯಿಂದ ಹೊರಬರಬಾರದು ಎಂದು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ನೌಕಾದಳದ ಕ್ಯಾಪ್ಟನ್ ಡಿ.ಕೆ. ಶರ್ಮ ಹೇಳಿದ್ದಾರೆ.
ಒರಿಸ್ಸಾದ 11 ಜಿಲ್ಲೆಗಳಾದ ಗಜಪತಿ, ಗಂಜಾಂ, ಖುರ್ದಾ, ಪುರಿ, ನಾಯ್ಗರ್, ಕಟ್ಟಾಕ್, ಜಗತ್ಸಿಂಗ್ಪುರ್, ಕೇದಾರಪರ, ಜೈಪುರ, ಭದ್ರಕ್ ಮತ್ತು ಬಾಲಾಸೂರ್ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಲ್ಲಿಯವರೆಗೆ 10,000 ಹಳ್ಳಿಗಳು ಮತ್ತು 52 ನಗರಪ್ರದೇಶಗಳ 11 ಲಕ್ಷ ಜನರನ್ನು ಬೇರೆ ಸೈಕ್ಲೋನ್ ಶೆಲ್ಟರ್ಗಳಿಗೆ ಕಳುಹಿಸಲಾಗಿದೆ. ಇಲ್ಲಿ 1 ಲಕ್ಷಕ್ಕೂ ಹೆಚ್ಚು ಒಣ ಆಹಾರದ ಪ್ಯಾಕೆಟ್ಗಳನ್ನು ಸಂಗ್ರಹಿಸಲಾಗಿದೆ. ಟೈಫೋನ್ ವಾರ್ನಿಂಗ್ ಸೆಂಟರ್ ನೀಡಿರುವ ಮಾಹಿತಿ ಪ್ರಕಾರ, 1999ರಲ್ಲಿ 10 ಸಾವಿರ ಜನರನ್ನು ಬಲಿ ಪಡೆದಿದ್ದ ಚಂಡಮಾರುತದ ನಂತರ ಈ ಫನಿ ಚಂಡಮಾರುತವೇ ಅತ್ಯಂತ ಭೀಕರವಾದುದು ಎನ್ನಲಾಗಿದೆ.
ಚಂಡಮಾರುತ ಫನಿ ಭೀತಿ ಇರುವ ಹಿನ್ನೆಲೆಯಲ್ಲಿ ಒಡಿಶಾ, ಆಂಧ್ರಪ್ರದೇಶ ಹಾಗೂ ಪಶ್ಚಿಮಬಂಗಾಳದ 19 ಜಿಲ್ಲೆಗಳಲ್ಲಿ ರೈಲ್ವೆ ಇಲಾಖೆ 81 ರೈಲುಗಳ ಸಂಚಾರವನ್ನು ರದ್ದುಪಡಿಸಿದ್ದು, ನಿನ್ನೆ ಎರಡು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. ಹೌರಾ-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಪಾಟ್ನಾ-ಎರ್ನಾಕುಲಂ ಎಕ್ಸ್‌ಪ್ರೆಸ್, ಹೊಸದಿಲ್ಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್, ಹೌರಾ-ಹೈದ್ರಾಬಾದ್ ಈಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್, ಭುವನೇಶ್ವರ-ರಾಮೇಶ್ವರಂ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ಈ ನಡುವೆ ಕರ್ನಾಟಕದಿಂದ ಚಲಿಸುವ ರೈಲು ಸಂಚಾರವನ್ನು ರದ್ದು ಪಡಿಸಲಾಗಿದೆ. ಹೌರಾ-ಯಶವಂತಪುರ, ಬೆಂಗಳೂರು-ಭುವನೇಶ್ವರ, ಬೆಂಗಳೂರು ದಂಡು ಪ್ರದೇಶ-ಗುವಾಹಟಿ, ಭುವನೇಶ್ವರ-ಬೆಂಗಳೂರು, ಹೌರಾ-ಮೈಸೂರು, ಪುರಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನೂ ರದ್ದುಪಡಿಸಲಾಗಿದೆ.