
ಬೆಂಗಳೂರು,ಮೇ2- ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತ ಅವರ ಜೊತೆಗಿನ ಸಭೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇತ್ತೀಚೆಗೆ ಇಂಡವಾಳು ಸಚ್ಚಿದಾನಂದ ಅವರ ಹುಟ್ಟುಹಬ್ಬ ಇತ್ತು. ನಮ್ಮನ್ನು ಆಹ್ವಾನಿಸಿದ್ದರು.
ಅದೇ ರೀತಿ ಸುಮಲತ ಅವರನ್ನೂ ಆಹ್ವಾನಿಸಿದ್ದಾರೆ. ಸುಮಲತ ಅವರು ಬಂದಾಗ ನಾವು ಅವರನ್ನು ನೀವು ಬೇರೆ ಕಡೆ ಕುಳಿತುಕೊಳ್ಳಿ ಎಂದು ಹೇಳಲು ಸಾಧ್ಯವೇ?ನಾವೇ ಎದ್ದು ಹೋಗುತ್ತೇವೆ ಎಂದು ಹೇಳುವುದು ಔಚಿತ್ಯವೇ? ಸಹಜವಾಗಿ ಎಲ್ಲ ಸ್ನೇಹಿತರು ಸೇರಿ ಊಟ ಮಾಡಿದ್ದೇವೆ. ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ.
ಹೋಟೆಲ್‍ನ ವಿಡಿಯೋ ತುಣುಕನ್ನು ಪ್ರಭಾವಿ ಅಧಿಕಾರಿಯೊಬ್ಬರು ಮುಖ್ಯಮಂತ್ರಿಯವರಿಗೆ ಕೊಟ್ಟಿದ್ದಾರೆ. ಉಡುಪಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಅಗತ್ಯವೇನಿದೆ? ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ. ಆದರೂ ಪೊಲೀಸರ ಮೂಲಕ ಈ ರೀತಿ ಕೆಲಸ ಮಾಡಿಸುವುದು ಎಷ್ಟು ಸರಿ ಎಂದು ಚುನಾವಣಾ ಆಯೋಗವೇ ಉತ್ತರಕೊಡಬೇಕು ಎಂದರು.
ಸಿಸಿಟಿವಿ ವಿಡಿಯೋ ಮಾಧ್ಯಮಗಳಿಗೆ ಸೋರಿಕೆ ಆಗಿರುವುದರ ಹಿಂದೆ ಮುಖ್ಯಮಂತ್ರಿಗಳ ಕೈವಾಡ ಇದೆ ಎಂದು ನಾನು ಆರೋಪ ಮಾಡುವುದಿಲ್ಲ. ಅವರಿಗೆ ಈ ವಿಷಯ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಮ್ಮ ಔತಣಕೂಟವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾವು ಪಕ್ಷೇತರ ಅಭ್ಯರ್ಥಿ ಸುಮಲತ ಅವರ ಪರ ಪ್ರಚಾರ ಮಾಡಿಲ್ಲ. ಮೈಸೂರು ಲೋಕಸಭಾ ಚುನಾವಣೆ ವೇಳೆ ಸಿದ್ದರಾಮಯ್ಯನವರು ಎಲ್ಲರ ಜೊತೆ ಚರ್ಚೆ ಮಾಡಿದ್ದರು. ಒಂದು ವೇಳೆ ಅಲ್ಲಿ ಫಲಿತಾಂಶ ವ್ಯತಿರಿಕ್ತವಾದರೆ ಅದರ ಹೊಣೆಯನ್ನು ಸಿದ್ದರಾಮಯ್ಯನವರೇ ಹೊರಬೇಕಾಗುತ್ತದೆ.
ತುಮಕೂರಿನಲ್ಲಿ ದೇವೇಗೌಡ ಪರ ಪ್ರಚಾರ ಮಾಡುವಂತೆ ಎಲ್ಲರಮಾತುಕತೆ ನಡೆಸಲಾಗಿತ್ತು. ಹಾಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರು. ಆದರೆ ಮಂಡ್ಯ ಚುನಾವಣೆಯಲ್ಲಿ ನಮ್ಮನ್ನು ಯಾರೂ ಕರೆಯಲಿಲ್ಲ. ಅಭ್ಯರ್ಥಿ ಆಯ್ಕೆ ಮುನ್ನವೇ ನಮ್ಮ ಜೊತೆ ಚರ್ಚೆ ಮಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾವೇ ಶಕ್ತರಾಗಿದ್ದೇವೆ ಎಂದು ಹೇಳಿದ್ದರು. ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಳ್ಳಿಲ್ಲ.
ಕಾಂಗ್ರೆಸ್ ನಾಯಕರು ಮಂಡ್ಯದ ಮುಖಂಡರ ಜೊತೆ ಮಾತನಾಡಿದರೇ ಹೊರತು, ಸಿಎಂ ಆಗಲಿ, ಜೆಡಿಎಸ್‍ನವರಾಗಲಿ ನಮ್ಮ ಜೊತೆ ಮಾತನಾಡಲಿಲ್ಲ. ಸುಮಲತ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಹಾಗಾಗಿ ಅವರು ಪಕ್ಷೇತರರಾಗಿ ನಿಂತರು. ನಮ್ಮ ಪಕ್ಷದ ಹೈಕಮಾಂಡ್ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಸುಮಲತ ಪರವಾಗಿ ಕೆಲಸ ಮಾಡಬಾರದೆಂದು ಆದೇಶ ಹೊರಡಿಸಿದರು.ನಾವು ಅದರಂತೆ ನಡೆದುಕೊಂಡಿದ್ದೇವೆ. ಸುಮಲತ ಪರವಾಗಿ ಎಲ್ಲಿಯೂ ಪ್ರಚಾರ ಮಾಡಿಲ್ಲ, ಸಭೆ ಸಮಾರಂಭಗಳಲ್ಲಿ ಭಾಗವಹಿಸಿಲ್ಲ. ನಮ್ಮಷ್ಟಕ್ಕೆ ನಾವು ಅಂತರ ಕಾಯ್ದುಕೊಂಡಿದ್ದೇವೆ.
ನಾವು ಎಲ್ಲಾದರೂ ಹೋದಾಗ ಕಾರ್ಯಕರ್ತರು ಬಂದು ಯಾವ ನಿಲುವು ತೆಗೆದುಕೊಳ್ಳಬೇಕೆಂದು ಕೇಳುತ್ತಿದ್ದರು. ನಿಮ್ಮ ಇಷ್ಟ ಬಂದ ಹಾಗೆ ನಿರ್ಧಾರ ತೆಗೆದುಕೊಳ್ಳಿ ಎಂದು ನಾವು ಹೇಳಿದ್ದೇವೆ. ನಾವು ನಿರ್ದಿಷ್ಟವಾಗಿ ಯಾರ ಪರವಾಗಿಯೂ ಪ್ರಚಾರ ಮಾಡಿಲಿಲ್ಲ.
ಸುಮಲತ ಪರವಾಗಿ ಮಸೀದಿಯಲ್ಲಿ ಪ್ರಚಾರ ಮಾಡಿದ್ದೇನೆಂಬ ವದಂತಿಗಳನ್ನು ಹಬ್ಬಿಸಿದ್ದಾರೆ. ನಾನು ಯಾವುದೇ ಮಸೀದಿಗೆ ಹೋಗಿಲ್ಲ. ಮಂಡ್ಯದಲ್ಲಿ ಅಲೀಮ್ ಎಂಬುವರ ಮನೆಗೆ ಹೋಗಿದ್ದು ನಿಜ. ಆದರೆ ಅಲ್ಲಿ ರಾಜಕೀಯ ಚರ್ಚೆ ಮಾಡಲಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಪಕ್ಷದ ಸೂಚನೆಯಂತೆ ನಡೆದುಕೊಂಡಿದ್ದೇವೆ. ನಮ್ಮ ಮೇಲೆ ಶಿಸ್ತುಕ್ರಮ ಕೈಗೊಳ್ಳುವುದು, ಬಿಡುವುದು ಕಾಂಗ್ರೆಸ್ ಹೈಕಮಾಂಡ್‍ಗೆ ಬಿಟ್ಟ ವಿಚಾರ.ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಚುನಾವಣೆಗೆ ಮುನ್ನ ಸುಮಲತ ಅವರ ಪರವಾಗಿ ಕೆಲಸ ಮಾಡಬಾರದೆಂಬ ಆದೇಶವಿತ್ತು.ಚುನಾವಣೆ ನಂತರ ಅವರ ಜೊತೆ ಮಾತನಾಡುವುದರಲ್ಲಿ ತಪ್ಪೇನು?ಇದಕ್ಕಾಗಿ ನಮ್ಮನ್ನು ತಪ್ಪಿತಸ್ಥರಂತೆ ಕಾಣುವುದು ಸರಿಯಲ್ಲ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಫಲಿತಾಂಶ ಏನೇ ಬರಲಿ, ಸುಮಲತ ಅವರನ್ನು ಕಾಂಗ್ರೆಸ್‍ನಿಂದ ದೂರ ಮಾಡಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಗದಂತಹ ಇಕ್ಕಟ್ಟಿನ ಪರಿಸ್ಥಿತಿ ನಮ್ಮಲ್ಲಿತ್ತು.ಇದನ್ನು ಆರಂಭದಲ್ಲೇ ಸರಿಪಡಿಸಬಹುದಿತ್ತು.ಆದರೆ ಆ ಪ್ರಯತ್ನ ಆಗಲಿಲ್ಲ. ಮುಖ್ಯಮಂತ್ರಿ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ನೀಡಿದ್ದಾರಂತೆ. ದೂರು ಕೊಡಲಿ ಅದಕ್ಕೆ ಬೇಕಾದಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿ ಕೊಟ್ಟಿದ್ದಾರಂತೆ. ನಾವು ಬೇಡ ಎನ್ನುವುದಿಲ್ಲ. ಕುಮಾರಸ್ವಾಮಿ ಎಷ್ಟು ದಿನ ಕಾಂಗ್ರೆಸ್ ಪಕ್ಷವನ್ನು ತಟುತ್ತಾರೋ ನೋಡುತ್ತೇವೆ.
ನಾವು ಹೋದ ಕಡೆ , ಬಂದ ಕಡೆಯಲೆಲ್ಲ ಗುಪ್ತಚರದ ಅಧಿಕಾರಿಗಳು ಫಾಲೋ ಮಾಡುತ್ತಿದ್ದಾರೆ. ನಾವೇನು ಟೆರರಿಸ್ಟ್‍ಗಳಲ್ಲ. ಆದರೂ ಹಿಂಬಾಲಿಸುವುದನ್ನು ಬಿಟ್ಟಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.