ಬೆಂಗಳೂರು: ನಗರದ ಆಟೋ ಚಾಲಕನ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಸುಬ್ರಮಣಿಯ ಇಂಟ್ರೆಸ್ಟಿಂಗ್ ಕಹಾನಿ ಬಯಲಾಗಿದೆ.
ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿತ್ತು. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಯ ವೇಳೆ ಇಷ್ಟೊಂದು ಸಂಪತ್ತಿಗೆ ಅಮೆರಿಕ ಮಹಿಳೆ ಕಾರಣ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಸುಬ್ರಮಣಿ ಕಳೆದ ಎಂಟು ವರ್ಷಗಳ ಹಿಂದೆ ಆಟೋ ಓಡಿಸಿಕೊಂಡಿದ್ದು, ವೈಟ್ ಫೀಲ್ಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಒಂದು ದಿನ ವಿದೇಶಿ ಮಹಿಳೆ ಲಕ್ಷ್ಮಿ ಜೆಟ್ಟಿ ವೈಟ್ ಫೀಲ್ಡ್ ಗೆ ಬಂದಿಳಿದಿದ್ದರು. ಈ ವೇಳೆ ಆಟೋ ಓಡಿಸುತ್ತಿದ್ದ ಸುಬ್ರಮಣಿ ಅವರನ್ನು ತನ್ನ ಆಟೋದಲ್ಲಿ ವಿಲ್ಲಾಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಚಾಲಕ ಸುಬ್ರಮಣಿ ತನ್ನ ಮಾತು, ನಡುವಳಿಕೆಯಿಂದ ಲಕ್ಷ್ಮಿ ಜೆಟ್ಟಿಯ ಮನಗೆದ್ದಿದ್ದನು.
ಇದಾದ ನಂತರ ಮಹಿಳೆಯ ಎಲ್ಲ ಕೆಲಸಗಳಿಗೂ ಇದೇ ಸುಬ್ರಮಣಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಏಕಾಂಗಿಯಾಗಿದ್ದ ವಿದೇಶಿ ಮಹಿಳೆಗೆ 80 ವರ್ಷ ವಯಸ್ಸಾಗಿರಬಹದು ಎಂದು ಸ್ಥಳೀಯರಿಂದ ಮಾಹಿತಿ ಲಭಿಸಿದೆ. ಈಗಲೂ ಎರಡು ಆಟೋಗಳನ್ನ ಬಾಡಿಗೆಗೆ ನೀಡಿರುವ ಸುಬ್ರಮಣಿ ಎರಡು ಕಾರುಗಳು ಹೊಂದಿದ್ದು, ಒಂದು ಕಾರು ಸ್ವಂತಕ್ಕೆ ಮತ್ತೊಂದು ಕಾರು ಬಾಡಿಗೆಗೆ ಬಿಟ್ಟಿದ್ದಾನೆ.
ಆಟೋ ಚಾಲಕ ಸುಬ್ರಮಣಿ ಮತ್ತು ವಿದೇಶಿ ಮಹಿಳೆ 2013ರಲ್ಲಿ ವಿಲ್ಲಾ ಬಾಡಿಗೆಗೆ ಎಂದು ಬಂದಿದ್ದರು. ಸುಮಾರು ಎರಡು ವರ್ಷಗಳ ಕಾಲ ತಿಂಗಳಿಗೆ 30 ಸಾವಿರ ಬಾಡಿಗೆ ಕಟ್ಟುತ್ತಿದ್ದರು. ನಂತರ 2015ರಲ್ಲಿ ವಿಲ್ಲಾ ಖರೀದಿಗೆ ಇಬ್ಬರು ಮುಂದಾಗಿದ್ದಾರೆ. ಆ ವೇಳೆ 1 ಕೋಟಿ 60 ಲಕ್ಷಕ್ಕೆ ವಿಲ್ಲಾ ಖರೀದಿ ಮಾಡಿದ್ದಾರೆ.
ಪ್ರತಿಹಂತದಲ್ಲೂ ಹತ್ತು ಲಕ್ಷದ ಚೆಕ್ಗಳ ಮೂಲಕ ಹಣ ನೀಡಿದ್ದಾರೆ. ಸುಬ್ರಮಣಿ ಮೊದಲಿಗೆ ಆಟೋ ಓಡಿಸುತ್ತಿದ್ದನು. ಈಗ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಲಕ್ಷ್ಮಿ ಜೆಟ್ಟಿ ಮದುವೆಯಾಗಿಲ್ಲ ಒಂಟಿಯಾಗಿದ್ದಾರೆ. ಅವರೇ ಹಣ ಕೊಟ್ಟು ವಿಲ್ಲಾ ಖರೀದಿ ಮಾಡಿದ್ದರು. ಮೊದಲ ಹಂತದಲ್ಲಿ ಸುಬ್ರಮಣಿ ವಾಸವಾಗಿದ್ದು, ಎರಡನೇ ಹಂತದಲ್ಲಿ ವಿದೇಶಿ ಮಹಿಳೆ ವಾಸವಾಗಿದ್ದಾರೆ. ಲಕ್ಷ್ಮಿ ಜೆಟ್ಟಿ ಹೊರಗಡೆ ಓಡಾಡುವುದು ತುಂಬಾ ಕಡಿಮೆ. ಹೀಗಾಗಿ ಸುಬ್ರಮಣಿ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ.
ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಸದ್ಯಕ್ಕೆ ವಿಲ್ಲಾ ಖರೀದಿ ಮಾಡಿದ್ದು ಯಾವಾಗ? ಎಷ್ಟು ಹಣಕ್ಕೆ ಖರೀದಿ ಮಾಡಿದ್ರು, ನಗದು ಅಥವಾ ಚೆಕ್ ಮೂಲಕ ಹಣ ನೀಡಿದ್ರಾ? ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.