ನವದೆಹಲಿ: ಕೇಂದ್ರ ಎನ್ ಡಿ ಎ ಸರ್ಕಾರ ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನ್ನು ರಾಜಕೀಯವಾಗಿ ಬಳಸಿಕೊಂಡು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿರುವ ಹಿನ್ನಲೆಯಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್, ಯುಪಿಎ ಅವಧಿಯಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಪಟ್ಟಿ ನೀಡಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಈ ಮೂಲಕ ನಮ್ಮ ಸರ್ಕಾರದ ಕಾಲದಲ್ಲೂ ಉಗ್ರರ ಮರಣಹೋಮ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, ನಮ್ಮ ಪಕ್ಷದ ಆಧಿಕಾರದ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಆಗಿವೆ ಅದರೆ ನಾವು ಅದನ್ನು ರಾಜಕೀಯವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಅದರೆ ಮೋದಿ ಅವರ ಸರ್ಕಾರವು ಸೈನ್ಯದ ಶೌರ್ಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ದೂರಿದರು.
2008 ರಿಂದ 2014ರ ವರೆಗೆ ನಡೆದಿರುವ 6 ಸರ್ಜಿಕಲ್ ಸ್ಟ್ರೈಕ್‍ಗಳ ವಿವರಗಳನ್ನು ಚಿತ್ರಗಳ ಸಮೇತ ಮಾಧ್ಯಮಗಳ ಮುಂದೆ ರಾಜೀವ್ ಶುಕ್ಲಾ ಬಿಡುಗಡೆ ಮಾಡಿದರು.
1. 2008 ಜೂನ್ 19 ರಂದು ಪಾಕಿಸ್ತಾನದ ಪೂಂಚ್ ಪ್ರದೇಶ
2. 2008 ಆಗಸ್ಟ್ 30 ರಿಂದ ಸೆಪ್ಟೆಂಬರ್ 1ರವರೆಗೆ ಪಾಕ್ ಆಕ್ರಮಿತ ಶಾರದಾ ಸೆಕ್ಟರಿನ ನೀಲಂ ನದಿ ಕಣಿವೆ
3. 2013 ಜನವರಿ 6 ರಂದು ಸಾವನ್ ಪಾತ್ರಾ ಚೆಕ್ ಪೋಸ್ಟ್
4. 2013 ಜುಲೈ 27 ಮತ್ತು 28 ರಂದು ನಾಜಪುರ್ ಕಣಿವೆ ಪ್ರದೇಶ
5. 2013 ಆಗಸ್ಟ್ 6 ರಂದು ನೀಲಮ್ ನದಿ ಕಣಿವೆಯಲ್ಲಿ
6. 2014 ಜನವರಿ 14 ರಂದು ನೀಲಮ್ ನದಿ ಕಣಿವೆ
ಈ ವಿಚಾರದ ಬಗ್ಗೆ ಹೇಳಿಕೆ ನೀಡಿರುವ ಮನಮೋಹನ್ ಸಿಂಗ್ ಅವರು, ಮೋದಿ ದೇಶದಲ್ಲಿ ಆಗಿರುವ ಆರ್ಥಿಕ ಹಿನ್ನಡೆಯನ್ನು ಮರೆಮಾಚಲು ಸೇನೆಯ ಶೌರ್ಯದ ಕಾರ್ಯಗಳ ಬಗ್ಗೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
‘6 Surgical Strikes in UPA Era’: Congress Lists Each One of Them to Counter PM Modi on National Security