
ಬೆಂಗಳೂರು, ಮೇ1- ನಾಲ್ಕು ಕಡೆ ಮತದಾನದ ಗುರುತಿನ ಚೀಟಿ ಹೊಂದಿರುವ ಹಿನ್ನೆಲೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಸುಭಾಷ್ ರಾಥೋಡ್ ಅವರ ನಾಮಪತ್ರವನ್ನು ರದ್ದುಪಡಿಸುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ಕುಮಾರ್ಗೆ ದಾಖಲೆಗಳ ಸಮೇತ ದೂರು ಸಲ್ಲಿಸಿರುವ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಸಂಚಾಲಕ ದತ್ತಗುರು ಹೆಗಡೆ, ಸಹ ವಕ್ತಾರರಾದ ಎಸ್.ಪ್ರಕಾಶ್, ಎ.ಎಚ್.ಆನಂದ್, ಮುಖಂಡ ಛಲವಾದಿ ನಾರಾಯಣಸ್ವಾಮಿ ಅವರುಗಳು, ಕೂಡಲೇ ಸುಭಾಷ್ ರಾಥೋಡ್ ಅವರ ನಾಮಪತ್ರವನ್ನು ಅಸಿಂಧುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸುಭಾಷ್ ರಾಥೋಡ್ ಗುಲ್ಬರ್ಗ ಜಿಲ್ಲೆಯ ಆಳಂದ, ಕಲಬುರಗಿ ದಕ್ಷಿಣ, ಕಲಬುರಗಿಯ ಚಿಂಚೋಳಿ ಹಾಗೂ ಗುಲ್ಬರ್ಗ ದಕ್ಷಿಣದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.
ಸುಭಾಷ್ ರಾಥೋಡ್ ನಾಲ್ಕು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿರುವುದರ ಜೊತೆಗೆ ಅಷ್ಟೇ ಸಂಖ್ಯೆಯ ಗುರುತಿನ ಚೀಟಿ ಹೊಂದಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಕೂಡಲೇ ಅವರ ನಾಮಪತ್ರವನ್ನು ರದ್ದುಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯಮಗಳ ಪ್ರಕಾರ ಓರ್ವ ವ್ಯಕ್ತಿ ಒಂದೇ ಕಡೆ ಮತದಾನದ ಹಕ್ಕು ಹೊಂದಿರಬೇಕು. ಒಂದಕ್ಕಿಂತ ಹೆಚ್ಚು ಕಡೆ ಮತಪಟ್ಟಿಯಲ್ಲಿ ಹೆಸರಿರುವುದು, ಗುರುತಿನಚೀಟಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ.
ನೀತಿಸಂಹಿತೆ ಉಲ್ಲಂಘನೆ ಮಾಡಿರುವ ಸುಭಾಷ್ ರಾಥೋಡ್ ಅವರ ನಾಮಪತ್ರವನ್ನು ಅಸಿಂಧು ಮಾಡದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಬಿಜೆಪಿ ಎಚ್ಚರಿಸಿದೆ.