ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 1.93 ಕೋಟಿ ರೂ. ಸಂಗ್ರಹ

ಕೊಳ್ಳೇಗಾಲ, ಏ.30- ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 1.93 ಕೋಟಿ ರೂ.ಸಂಗ್ರಹವಾಗಿದೆ.
ಏಪ್ರಿಲ್ ತಿಂಗಳ 28 ದಿನಗಳ ಸಂಗ್ರಹ ಇದಾಗಿದ್ದು ಈ ಮಾಹೆ ಯುಗಾದಿ ಜಾತ್ರೆ ನಡೆದಿದ್ದರಿಂದ ಕ್ಷೇತ್ರಕ್ಕೆ ಭಕ್ತರ ಸಂಖ್ಯೆ ಹೆಚ್ಚಳ ವಾಗಿತ್ತು.ಜಾತ್ರೆಗೆ ಆಗಮಿಸಿದ್ದ ಭಕ್ತರು ಹೆಚ್ಚು ಹರಕೆ ಕಾಣಿಕೆಗಳನ್ನು ಹಾಕಿರುವುದೆ ಈ ದಾಖಲೆ ಮೊತ್ತ ಸಂಗ್ರಹವಾಗಲು ಕಾರಣವಾಗಿದೆ. ಹಾಗಾಗಿ ಈ ಬಾರಿ 1,93,73,279 ರೂ.ನಗದು 105 ಗ್ರಾಂ, ಚಿನ್ನ ಹಾಗೂ 2 ಕೆ.ಜಿ 418 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಕಳೆದ ಬಾರಿ 2,13,93,334 ರೂ.ನಗದು 55 ಗ್ರಾಂ, ಚಿನ್ನ ಹಾಗೂ 1 ಕೆ.ಜಿ 813 ಗ್ರಾಂ ಬೆಳ್ಳಿ ಸಂಗ್ರಹವಾಗಿತ್ತು. ಈ ಬಾರಿ 105 ಗ್ರಾಂ, ಚಿನ್ನ ಹಾಗೂ 2 ಕೆ.ಜಿ 418 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.ಈ ಬಾರಿ ನಗದಿಗಿಂತ ದುಪ್ಪಟ್ಟು ಚಿನ್ನ ಬೆಳ್ಳಿ ಸಂಗ್ರಹವಾಗಿದೆ.
ನಿನ್ನೆ ಬೆಳಿಗ್ಗೆಯಿಂದ ಮಧ್ಯರಾತ್ರಿ 1.30 ರ ವರೆಗೆ ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಗುರುಸ್ವಾಮಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಸಿ.ಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪ್ರಾಧಿಕಾರದ ಸಿಬ್ಬಂದಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳಿಯ ಶಾಖೆ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯ ನಡೆಸಿದರು. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿ ರಾಜಶೇಖರ ಮೂರ್ತಿ, ದೇವಾಸ್ಥಾನದ ಅಧೀಕ್ಷಕ ಬಸವರಾಜು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಸೇಂದಿಲ್‍ನಾಥನ್, ಆರೋಗ್ಯ ನಿರೀಕ್ಷಕ ಶ್ರೀಕಾಂತ್ ವಿಭೂತಿ, ಮಲೆ ಮಹದೇಶ್ವರ ಬೆಟ್ಟ ಠಾಣೆಯ ಸಿ.ಪಿ.ಐ ಗೋಪಾಲ್ ಕೃಷ್ಣ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ