ಬೆಂಗಳೂರು, ಏ.30- ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮೇ 7ರ ಬಸವಜಯಂತಿ ದಿನದೊಳಗೆ ಜಗರಿಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸದಿದ್ದರೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ವೇದಿಕೆ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪ್ರದೀಪ್ ಕಂಕಣವಾಡಿ, ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಅಳವಡಿಸಲು ಅಧಿಕೃತ ಆದೇಶ ಹೊರಡಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ ಎಂದು ದೂರಿದರು.
ಜಗದ್ಗುರು ಬಸವಣ್ಣನವರು ಯಾವುದೇ ಒಂದು ಧರ್ಮ, ಜಾತಿ, ವರ್ಗಕ್ಕೆ ಸೀಮಿತವಾದವರಲ್ಲ. ಸಾಮಾಜಿಕ, ಆರ್ಥಿಕ ಸಮಾನತೆಗಾಗಿ ಶ್ರಮಿಸಿ ಸಾಮಾಜಿಕ ಸುಧಾರಣೆ ತಂದ ಹರಿಕಾರರು. ಅಂತಹ ಮಹಾನುಭಾವರಾದ ಭಾವಚಿತ್ರ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಆದೇಶ ಮಾಡಿ ಎರಡು ವರ್ಷಗಳು ಕಳೆದಿದ್ದರು ಇಲ್ಲಿಯವರೆಗೆ ಕೇವಲ ಕೆಲವು ಕಚೇರಿಗಳಲ್ಲಿ ಮಾತ್ರ ಅಳವಡಿಸಿದ್ದಾರೆ.ಅದರಿಂದ ಮುಂದೆ ಬರುವ ಬಸವಜಯಂತಿ ಒಳಗೆ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕು ಎಂದು ಅವರು ಮನವಿ ಮಾಡಿದರು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಸವಮೂರ್ತಿಗಳ ಮುಂದೆ ನಮ್ಮ ಸಂಘಟನೆಗಳ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಪ್ರದೀಪ್ ಕಂಕಣವಾಡಿ ಎಚ್ಚರಿಸಿದರು.