ಶ್ರೀಲಂಕಾದಲ್ಲಿ ಮತ್ತೊಂದು ಆತ್ಮಾಹುತಿ ಬಾಂಬ್​ ದಾಳಿಗೆ ಸಂಚು?; ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ ಸರ್ಕಾರ

ಕೊಲಂಬೋಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್​ ದಾಳಿಯಲ್ಲಿ 253 ಜನ ಸಾವನ್ನಪ್ಪಿದ್ದರು. ಇದಾದ ನಂತರ ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ದುರಂತಕ್ಕೆ ತಾವೇ ಕಾರಣ ಎಂದು ಐಸಿಸ್​ ಸಂಘಟನೆ ಒಪ್ಪಿಕೊಂಡಿತ್ತು. ಇದೆಲ್ಲ ಆಗಿ ಒಂದು ವಾರ ಕಳೆದಿದೆ. ಈ ನಡುವೆ ಶ್ರೀಲಂಕಾ ಪೊಲೀಸ್​ ಭದ್ರತಾ ವಿಭಾಗದ ಅಧಿಕಾರಿಗಳು ಮತ್ತೊಂದು ಆಘಾತಕಾರಿ ವಿಷಯವನ್ನು ಹೊರಹಾಕಿದ್ದು, ಈಸ್ಟರ್​ ಪಾರ್ಟಿ ದಿನ ನಡೆದ ಚರ್ಚ್​ ಮತ್ತು ಐಷಾರಾಮಿ ಹೋಟೆಲ್​ಗಳ ಮೇಲಿನ ಸರಣಿ ಆತ್ಮಾಹುತಿ ಬಾಂಬ್​ ದಾಳಿಯ ಹಿಂದೆ ಇಸ್ಲಾಮಿಸ್ಟ್​ ಸೈನಿಕರ ಕೈವಾಡವಿದೆ. ಇದೇರೀತಿ ಮಿಲಿಟರಿ ಸಮವಸ್ತ್ರದಲ್ಲಿದ್ದುಕೊಂಡು ಇನ್ನಷ್ಟು ಬಾಂಬ್​ ಸ್ಫೋಟ ನಡೆಸಲು ಉಗ್ರರು ತಂತ್ರ ರೂಪಿಸಿದ್ದಾರೆ ಎಂಬ ಎಚ್ಚರಿಕೆಯನ್ನು ನೀಡಿದೆ.

ಶೀಘ್ರದಲ್ಲೇ ಮತ್ತೊಂದು ಭಯಾನಕ ದಾಳಿ ನಡೆಯುವ ಸಾಧ್ಯತೆಯಿದೆ. ಹಾಗಾಗಿ, ಎಲ್ಲ ರೀತಿಯಿಂದಲೂ ಎಚ್ಚರದಿಂದಿರಬೇಕು ಎಂದು ಮಿನಿಸ್ಟ್ರಿಯಲ್ ಸೆಕ್ಯುರಿಟಿ ಡಿವಿಷನ್ ಮುಖ್ಯಸ್ಥರು ಶ್ರೀಲಂಕಾದ ಶಾಸಕರು ಮತ್ತು ಇತರೆ ಭದ್ರತಾ ವಿಭಾಗಗಳಿಗೆ ಪತ್ರ ಬರೆದಿದ್ದಾರೆ. ಮಿಲಿಟರಿ ಡ್ರೆಸ್​ ಹಾಕಿಕೊಂಡಿರುವ ಮತ್ತು ಮಿಲಿಟರಿ ವಾಹನದಲ್ಲಿಯೇ ಬಂದು ಬಾಂಬ್​ ಸ್ಫೋಟಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಕೂಡ ಪತ್ರದಲ್ಲಿ ತಿಳಿಸಿದ್ದಾರೆ.

ಉಗ್ರರು ಈ ಬಾರಿ ಮುಖ್ಯವಾಗಿ 5 ಸ್ಥಳಗಳನ್ನು ಗುರುಯಾಗಿಸಿಕೊಂಡು ದಾಳಿ ನಡೆಸಲಿದ್ದಾರೆ ಎಂದು ಕೂಡ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಅಥವಾ ಸೋಮವಾರ ದಾಳಿ ನಡೆಯುವ ಸಾಧ್ಯತೆ ಹೆಚ್ಚು ಎಂದು ಕೂಡ ಪತ್ರದಲ್ಲಿ ತಿಳಿಸಲಾಗಿತ್ತು. ಆದರೆ, ನಿನ್ನೆ ಯಾವುದೇ ಅಹಿತಕರ ಘಟನೆ ನಡೆಯದಿರುವ ಹಿನ್ನೆಲೆಯಲ್ಲಿ ಇಂದು ಸೂಕ್ಷ್ಮ ಮತ್ತು ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಅಲರ್ಟ್​ ಘೋಷಿಸಲಾಗಿದೆ.

ಬಾಂಬ್​ ಸ್ಫಟವಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ಸರ್ಕಾರ ನಿನ್ನೆ ರಾತ್ರಿ ಕರ್ಫ್ಯೂಗೆ ಆದೇಶ ನೀಡಿತ್ತು. ಆದರೆ, ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಪೊಲೀಸರು ಜನರ ಬಾಡಿ ಚೆಕ್ ಮಾಡಿ ಬಿಡುತ್ತಿದ್ದರು. ಈಗಾಗಲೇ ಈ ದಾಳಿಯ ಹಿಂದೆ ನ್ಯಾಷನಲ್ ತವ್​ಹೀದ್​ ಜಮಾತ್​ ಮತ್ತು ಜಮೀಯತುಲ್ ಮಿಲ್ಲಾತು ಇಬ್ರಾಹಿಂ ಸಂಘಟನೆಗಳ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಐಸಿಸ್​ ಈ ಘಟನೆಯ ಹೊಣೆಯನ್ನು ಹೊತ್ತಿದ್ದರೂ ಈ 2 ಸಂಘಟನೆಗಳನ್ನು ಬ್ಯಾನ್​ ಮಾಡಲಾಗಿದೆ.

ಇದೀಗ ಉಗ್ರರು ಟಾರ್ಗೆಟ್​ ಮಾಡಿರುವ 5 ಸ್ಥಳಗಳಲ್ಲಿ ಬಟ್ಟಿಕಲೋವ ನಗರದ ಮೇಲೆ ಬಾಂಬ್​ ದಾಳಿ ನಡೆಸಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈಗಾಗಲೇ ಈ ಸ್ಥಳದಲ್ಲಿ ಕಳೆದ ವಾರ ನಡೆದ ಚರ್ಚ್​ ಮೇಲಿನ ದಾಳಿಯಲ್ಲಿ 27 ಜನರು ಸಾವನ್ನಪ್ಪಿದ್ದರು. ಉಳಿದ 4 ಪ್ರದೇಶಗಳ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಬಗ್ಗೆ ಶ್ರೀಲಂಕಾದ ಸಚಿವರು ಮತ್ತು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಸಂಶಯಾಸ್ಪದ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ