ಉಡುಪಿ, ಏ.29-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಗೌಡರು ಮತ್ತು ಕುಮಾರಸ್ವಾಮಿ ಉಡುಪಿಗೆ ಆಗಮಿಸಿದರು.
ಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಕಾಪುವಿನ ಬಳಿ ಇರುವ ಖಾಸಗಿ ರೆಸಾರ್ಟ್ನ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಇನ್ನೂ ಎರಡು ಮೂರು ದಿನಗಳ ಕಾಲ ಅಲ್ಲೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇಬ್ಬರು ನಾಯಕರು ಎಷ್ಟು ದಿನ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಎಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ಆಯುರ್ವೇದ ಚಿಕಿತ್ಸೆ ಪಡೆದಿದ್ದರು. ಆದರೆ, ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಜೆಡಿಎಸ್ ಮುಖಂಡರು ಮೃತಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಈಗ ಮತ್ತೆ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ.
ಗೌಡರು ಎಷ್ಟು ದಿನ ಚಿಕಿತ್ಸೆ ಹಾಗೂ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಬಗ್ಗೆಯೂ ಖಚಿತ ಮಾಹಿತಿ ಇಲ್ಲ .
ಮೇ 23 ರವರೆಗೂ ರಾಜ್ಯದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಸಭೆಗಳನ್ನು ಹಿರಿಯ ಅಧಿಕಾರಿಗಳೇ ನಡೆಸಬೇಕಾಗಿದೆ. ಚುನಾಯಿತ ಪ್ರತಿನಿಧಿಗಳು ಸಭೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲದಿರುವುದರಿಂದ ಮುಖ್ಯಮಂತ್ರಿ ಆಯುರ್ವೇದ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.