ಬೆಳಗಾವಿ,ಏ.28- ರಾಂಗ್ ನಂಬರ್ ಮೂಲಕ ಪರಿಚಯವಾದ ಯುವಕ ಯುವತಿಯರು ಕೊನೆಗೆ ಹಸೆಮಣೆ ಏರಿದ ಅಪರೂಪದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಲಾರಿ ಚಾಲಕ ಜಾವೇದ್ ಅಮೀದ್ ಖಾನ್ ಹಾಗೂ ಗುಜರಾತ್ನ ಅಹ್ಮದಾಬಾದ್ ಮೂಲದ ಮತ್ತೊಬ್ಬ ಲಾರಿ ಚಾಲಕನ ಮಗಳು ರೋಶನ್ ಬಾನು ಹಸೆಮಣಿ ಏರಿದ ಜೋಡಿ.
ಎರಡು ವರ್ಷಗಳ ಹಿಂದೆ ಅಂಬಡಗಟ್ಟಿ ಗ್ರಾಮದ, 23 ವರ್ಷದ ಜಾವೀದ್ಗೆ ಅಪರಿಚಿತ ಕಾಲ್ವೊಂದು ಬಂತು.
ಕರೆ ಸ್ವೀಕರಿಸುತ್ತಿದ್ದಂತೆಯೇ ಆ ಕಡೆಯಿಂದ ಯುವತಿ ರಾಂಗ್ ನಂಬರ್ ಸ್ಸಾರಿ ಅಂತ ಪೋನ್ ಕಟ್ ಮಾಡಿದಳು. ಯಾರು ಇರಬಹುದೆಂದ ಕುತೂಹಲಕ್ಕಾಗಿ ಜಾವೀದ್ ಮತ್ತೆ ಅದೇ ನಂಬರ್ಗೆ ಪೋನ್ ಮಾಡಿದಾಗ ಆ ಯುವತಿ ಅಹಮದಾಬಾದ್ ಬಳಿಯ ಸಂತರಾಂಪುರ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ.
ಅಷ್ಟೇ ಅಲ್ಲ ಅವಳು ಲಾರಿ ಚಾಲಕನ ಮಗಳು ಅಂತಾನೂ ಗೊತ್ತಾಯಿತು. ರೋಶನ್ ಬಾನು ತನ್ನ ಗೆಳತಿಗೆ ಕರೆ ಮಾಡಲು ಹೋಗಿ ಲೈನ್ ಕ್ರಾಸ್ ಆಗಿ ಆ ಕರೆ ಜಾವೀದ್ ನಂಬರ್ಗೆ ಬಂದಿತ್ತು. ಒಮ್ಮೆ ಮಾತನಾಡಿದ ನಂತರ ಇಬ್ಬರೂ ಒಬ್ಬರಿಗೊಬ್ಬರು ಪರಿಚಯವಾಗಿ ನಂತರ ಇದೇ ಪರಿಚಯ ಪ್ರೇಮಕ್ಕೆ ತಿರುಗಿದೆ.
ಕಳೆದ ಎರಡು ವರ್ಷಗಳಿಂದ ಪೋನ್ನಲ್ಲೇ ಇಬ್ಬರೂ ಮಾತುಕತೆ ನಡೆಸುತ್ತಾ ಪ್ರೀತಿಯಲ್ಲಿದ್ದರು. ಇತ್ತೀಚಿಗೆ ಮನೆಯಲ್ಲಿ ಹಠ ಹಿಡಿದು ಕಿತ್ತೂರು ತಾಲೂಕಿನ ಅಂಬಡಗಟ್ಟಿಗೆ ತನ್ನ ಪೋಷಕರೊಂದಿಗೆ ರೋಶನ್ ಬಾನು ಆಗಮಿಸಿ ಜಾವೀದ್ ಮನೆಯವರ ಜೊತೆ ಮಾತನಾಡಿದ್ದಾರೆ. ಬಳಿಕ ಮದುವೆ ಮಾಡುವುದಾಗಿ ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ.
ಅದರಂತೆ ಅಂಬಡಗಟ್ಟಿ ಗ್ರಾಮದಲ್ಲಿರುವ ಸತೀಶ್ ಜಾರಕಿಹೊಳಿ ಕಲ್ಯಾಣ ಮಂಟಪದಲ್ಲಿ ಎರಡು ಕಡೆ ಪ್ರಮುಖರ ಸಮ್ಮುಖದಲ್ಲಿ ಸರಳ ವಿವಾಹ ನೆರವೇರಿದೆ.
ರಾಂಗ್ ನಂಬರ್ ಕರೆಯೊಂದು ಈಗ ಸಿನಿಮೀಯ ರೀತಿಯಲ್ಲಿ ಮದುವೆಯಾಗುವ ಮೂಲಕ ಸುಖಾಂತ್ಯಗೊಂಡಿದೆ.